ADD

Back To Free Articles

March-2019

ತಲೆನೋವಿಲ್ಲದ ಪ್ರೋಟ್ರೇ ಸಸ್ಯೋತ್ಪಾದನೆ

ವಿಧಾನದಲ್ಲಿ ಕಡಿಮೆ ಅವಧಿಯಲ್ಲಿ, ಗುಣಮಟ್ಟದ ಸಸಿ ಬೆಳೆಸಬಹುದು. ಕಡಿಮೆ ಬೀಜ ಸಾಕು. ಒಂದೇ ರೀತಿಯ ಬೆಳವಣಿಗೆ ಸಿಗುತ್ತದೆ. ಬೇರುಗಳಿಗೆ ಹಾನಿ ಕಡಿಮೆ. ಸಸ್ಯಾಭಿವೃದ್ಧಿಯಲ್ಲಿ ನೂರಕ್ಕೆ ನೂರು ಯಶಸ್ಸು.

 

ಲೇ: ಭಾಗ್ಯಲಕ್ಷ್ಮೀ ಭಿಡೆ

 
no image
 

ಣ್ಣಿನಲ್ಲೇ ತರಕಾರಿ ಬೀಜ ಬಿತ್ತಿ ಕೃಷಿ ಮಾಡುವ ಕಾಲ ಕಳೆದುಹೋಗುತ್ತಿದೆ. ಇದಕ್ಕೆ ಬದಲು, ಈಗೀಗ  ಪ್ರೋ-ಟ್ರೇಗಳಲ್ಲಿ ಬೀಜ ಮೊಳಕೆ ಬರಿಸಿ ಸ್ಥಳಾಂತರಿಸುತ್ತಾರೆ. ಇದು ಅನುಕೂಲಕರ, ತಲೆನೋವೂ ಕಮ್ಮಿ.

ಪ್ರೋ ಟ್ರೇ ಸಸ್ಯೋತ್ಪಾದನೆ ಎಂದರೆ ಏನು? ಶಿಶು ಗಿಡ ಬೆಳೆಯಲು ಬೇಕಾದಷ್ಟೇ ಪುಟಾಣಿ ಕುಳಿಗಳಿರುವ ಪ್ಲಾಸ್ಟಿಕ್ ತಟ್ಟೆಯೇ  ಪ್ರೋ ಟ್ರೇ. ಬೇರೆ ಬೇರೆ ಗಾತ್ರದ ಕುಳಿಗಳೊಂದಿಗೆ ಇವು ಮಾರುಕಟ್ಟೆಯಲ್ಲಿ ಲಭ್ಯ. ಮರುಬಳಕೆಯೂ ಸಾಧ್ಯ.

ತರಕಾರಿ ಕೃಷಿಯಲ್ಲಿ ಮುಂದುವರಿದ ಪ್ರದೇಶಗಳಲ್ಲಿ, ನೆರೆಯ ಕೇರಳದ ಕಾಸರಗೋಡಿನಲ್ಲೂ ಸಸ್ಯೋತ್ಪಾದನೆಗೆ  ಪ್ರೋ ಟ್ರೇ ಬಳಕೆ ಜನಪ್ರಿಯವಾಗುತ್ತಲಿದೆ. ಆದರೆ ಮಲೆನಾಡು, ಕರಾವಳಿಯಲ್ಲಿ ಅಷ್ಟಾಗಿ ಬಂದಂತಿಲ್ಲ. ಕರಾವಳಿಯಲ್ಲಿ ಈಗ ಚಳಿಗಾಲದ ತರಕಾರಿಗಳಾದ ಹೂಕೋಸು, ಎಲೆಕೋಸುಗಳ ಕೃಷಿಯ ಬಗ್ಗೆ ಒಲವು ಮೂಡುತ್ತಿದೆ. ಕೇರಳ ಕೃಷಿ ವಿಶ್ವವಿದ್ಯಾಲಯ (ಕೇಕೃವಿ) ಪ್ರಯೋಗಿಸಿ ನೋಡಿದ ತಳಿಗಳನ್ನು ಇಲ್ಲಿ ಚಳಿಗಾಲದಲ್ಲಿ ಬೆಳೆಸಬರುತ್ತದೆ. ರಸವಿಷ ಬೇಕಾಗಿಲ್ಲ.

ಆದರೆ, ಚಳಿಗಾಲದ ತರಕಾರಿ ಗಿಡಗಳಿಗಾಗಿ ಕರಾವಳಿ ಕರ್ನಾಟಕದ ಮಂದಿ ಕಾಸರಗೋಡಿಗೇ ಹೋಗಬೇಕು. ಈ ಅವಲಂಬನೆ ತಪ್ಪಿಸಲು ಮಂಗಳೂರಿನಲ್ಲಿ ಈಚೆಗೆ  ಪ್ರೋ  ಟ್ರೇ ಗಿಡ ಉತ್ಪಾದನೆಯ ಕಾರ್ಯಾಗಾರ ನಡೆಸಲಾಗಿತ್ತು.

ಕಾರ್ಯಕ್ರಮ ಸಂಘಟಿಸಿದ್ದು ಸಾವಯವ ಗ್ರಾಹಕ ಬಳಗ, ಮಂಗಳೂರು ಹಾಗೂ ವಿಶ್ವವಿದ್ಯಾನಿಲಯ ಕಾಲೇಜಿನ ಸಸ್ಯಶಾಸ್ತ್ರ ವಿಭಾಗ. ಮಂಗಳೂರಿನ ಸಾವಯವ ಕೃಷಿಕ ಪ್ರದೀಪ್ ಸೂರಿ ದಂಪತಿಗಳೂ ಇದಕ್ಕಾಗಿ ಶ್ರಮಿಸಿದ್ದರು. ಕಾಸರಗೋಡಿನಲ್ಲಿ ಕೃಷಿ ಇಲಾಖೆಯ ATMA ದ ಹಿರಿಯ ಅಧಿಕಾರಿ, ಕೃಷಿ ಮಹಿಳೆ ಲವ್ಲಿ ಆಗಸ್ಟಿನ್ ಈ ತರಬೇತಿ ನಡೆಸಿಕೊಟ್ಟರು. ಇದು ನಡೆದದ್ದು ಮಂಗಳೂರಿನ ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ.

ಮಣ್ಣು ಬೇಡ

ಪ್ರೋ ಟ್ರೇ ಸಸ್ಯೋತ್ಪಾದನೆಗೆ ಬೇಕಾದ ಒಳಸುರಿಗಳು ಇಷ್ಟೇ:  ಪ್ರೋಟ್ರೇ, ಉತ್ತಮ ದರ್ಜೆಯ ಬೀಜ ಮತ್ತು ಕೊಕೊ ಪೀಟ್. ಸಾದಾ ಕೊಕೊ ಪೀಟ್ ಅಲ್ಲದೆ, ಮಾರುಕಟ್ಟೆಯಲ್ಲಿ `ಎನ್ ರಿಚ್ಡ್ ಕೊಕೊ ಪೀಟ್' ಸಿಗುತ್ತದೆ. ಬೆಲೆ ಜಾಸ್ತಿ. ಆದರೆ ಇದು ಸ್ಟೆರಿಲೈಸ್ಡ್ ಆಗಿರುತ್ತದೆ, ಇದರಲ್ಲಿ ಪೋಷಕಾಂಶಗಳು ಇರುತ್ತವೆ. ಇದನ್ನು ಬಳಸಿ ಹೆಚ್ಚು ಆರೋಗ್ಯಪೂರ್ಣ ಸಸಿ ಪಡೆಯಬಹುದು. ಮೊದಲಿಗೆ ಕೊ-ಕೋಪೀಟನ್ನು ಪ್ರೋ ಟ್ರೇಯ ಗುಳಿಯಲ್ಲಿ ಹರಡಬೇಕು. ನಂತರ ಇನ್ನೊಂದು ಖಾಲಿ ಪ್ರೋ ಟ್ರೇಯನ್ನು ಈ ಟ್ರೇಯ ಮೇಲೆ ಇಟ್ಟು, ಹಗುರವಾಗಿ ಒತ್ತಬೇಕು.  ಇದರಿಂದ ಮೊದಲನೆಯ ಟ್ರೇಯ ಕುಳಿಗಳಲ್ಲಿ ಕೊಕೊಪೀಟ್ ಸರಿಯಾಗಿ ತುಂಬಿ ಮೇಲ್ಭಾಗದಲ್ಲಿ ಎಡೆ ಉಂಟಾಗುತ್ತದೆ.

ಬೀಜ ಬಿತ್ತುವ ಮುನ್ನ ಹತ್ತು ಮಿ.ಲೀ. ಸೂಡೋಮೊನಾಸ್ ಒಂದು ಲೀಟರ್ ನೀರಿನಲ್ಲಿ ಕರಗಿಸಿ ಮಾಡಿದ ಈ ದ್ರಾವಣದಲ್ಲಿ ಅದ್ದಿ ತೆಗೆಯಬೇಕು. ಇದರಿಂದ ರೋಗಬಾಧೆ ದೂರವಾಗುತ್ತದೆ.

ಒಂದು ಕುಣಿಯಲ್ಲಿ ಒಂದೇ ಬೀಜ ಹಾಕಿ  ಮೇಲೆ ತೆಳುವಾಗಿ ಕೊಕೊಪೀಟ್ ಹರಡಬೇಕು.  ಬಳಸುವ ಒಟ್ಟು ಕೊಕೊಪೀಟಿನ ಪ್ರಮಾಣ, ಬೀಜದ ಸುತ್ತಳತೆಯ ಮೂರು ಪಟ್ಟು ಇರಬೇಕು ಅಂತ  ಲೆಕ್ಕ.  ಹಲವಾರು ಟ್ರೇಗಳಲ್ಲಿ ಬಿತ್ತುವುದಿದ್ದರೆ, ಬೇಕಿದ್ದರೆ, ಒಂದರ ಮೇಲೊಂದು ಇಡಬಹುದು. ಆದರೆ ಒತ್ತಡ ಹಾಕಬೇಡಿ.

ಪ್ರೋ ಟ್ರೇಗಳನ್ನು ಪಾಲಿಥೀನ್ ಶೀಟಿನಿಂದ ಮುಚ್ಚಬೇಕು.  ಇದರ ಉದ್ದೇಶ ಬೀಜ ಮೊಳಕೆಯೊಡೆಯಲು ಅನುಕೂಲಕರ ವಾತಾವರಣ ಕಲ್ಪಿಸುವುದು. ಮೂರರಿಂದ ಆರು ದಿನಾನಂತರ, ಮೊಳಕೆ ಒಡೆದದ್ದು ಕಂಡ ಕೂಡಲೇ ಪಾಲಿ ಶೀಟ್ ತೆಗೆದು ಬಿಡಿ. ಕುಳಿಗಳಲ್ಲಿ ತೇವಾಂಶ ಹೆಚ್ಚಿದ್ದರೆ ಅದು ಕಾಯಿಲೆಗಳನ್ನು ಸ್ವಾಗತಿಸಬಹುದು.  ಇದನ್ನು ತಪ್ಪಿಸಲು ಒಂದು ಉಪಾಯವಿದೆ. ಪ್ರೋ ಟ್ರೇಗಳನ್ನು ಒಂದು ಬದಿ ಎತ್ತರ, ಇನ್ನೊಂದು ಬದಿ ತಗ್ಗು ಇರುವಂತೆ, ಚಾರೆಯಾಗಿ, ಸ್ವಲ್ಪ ಎತ್ತರ ಸ್ಥಳದಲ್ಲಿ ಸ್ವಲ್ಪ ಕಾಲ ಇಡಬೇಕು.  ಟ್ರೇಗಳು ಮಣ್ಣಿನ ಸಂಪರ್ಕಕ್ಕೆ ಬರದಿರಲಿ. ಬಂದರೆ, ಶಿಲೀಂಧ್ರದ ಹಾವಳಿ ತಗಲುವ ಅಪಾಯವಿದೆ.

ನೆರಳಲ್ಲೇ ಆರೈಕೆ

ಟ್ರೇಗಳನ್ನು ಈ ಹಂತದಲ್ಲಿ ನೇರ ಬಿಸಿಲಿಗೆ ಒಡ್ಡಬೇಡಿ. ಅವನ್ನು ಪಾಲಿಹೌಸ್, ನೆರಳುಮನೆ ಅಥವಾ ನೆರಳಿನಲ್ಲಿ ಇಡಬೇಕು.  ಮೊಳಕೆ ಬಂದು ಮೂರನೆ ದಿನ ಮೊದಲ ಬಾರಿ ನೀರುಣಿಸಬೇಕು. ಪ್ರತಿ ಕುಣಿಗೆ ತಲಾ ಹದಿನೈದು ಮಿ.ಲೀ. ನೀರು ಸಾಕು. ಪೈಪುಗಳ ಮೂಲಕ ನೀರು ಹಾಯಿಸಿದರೆ, ಹಾನಿಸಾಧ್ಯತೆ ಹೆಚ್ಚು. ಹೀಗಾಗಿ ನೀರನ್ನು ಸ್ಪ್ರೇ ಕ್ಯಾನ್ ಮೂಲಕವೇ ಉಣಿಸಬೇಕು. 

ಮರುದಿನದಿಂದ ಪ್ರತಿದಿನ ಬೆಳಗ್ಗೆ ತಲಾ ಏಳರಿಂದ ಹತ್ತು ಮಿ.ಲೀ. ನೀರು ಚಿಮುಕಿಸಿ. ಎಲೆಗಳ ಮೇಲೆ ನೀರುಣಿಸಿದರೆ - ಪೋಲಿಯಾರ್ ಸ್ಪ್ರೇ - ಸಾಕು. ಇದರಿಂದ ರೋಗಬಾಧೆ ತಪ್ಪುತ್ತದೆ. ತಾಪಮಾನ ಜಾಸ್ತಿ ಇದ್ದರೆ, ರೋಸ್ ಕ್ಯಾನ್ ಮೂಲಕ ದಿನಕ್ಕೆ ಎರಡು ಬಾರಿ ನೀರುಣಿಸಬಹುದು.

ಕ್ಯಾಬೇಜ್ ಹಾಗೂ ಕಾಲಿಫ್ಲವರ್ ಸಸಿಗಳನ್ನು 20 - 30 ದಿವಸ, ಅಲಸಂಡೆ ಗಿಡಗಳನ್ನು ಹದಿನೆಂಟು ದಿವಸಗಳ ವರೆಗೆ ಮಾತ್ರ ಪ್ರೋ ಟ್ರೇಗಳಲ್ಲಿ ಇಟ್ಟುಕೊಳ್ಳಬಹುದು.  ಅವಧಿ ಮೀರಿ ನೆಟ್ಟರೆ, ಹೆಚ್ಚು ಬೆಳೆ ಸಿಗುವುದಿಲ್ಲ. ಕೊಕೊಪೀಟ್ ಒದ್ದೆಯಾಗಿದ್ದರೆ ಪ್ರೋ ಟ್ರೇಯಿಂದ ಸಸಿಗಳನ್ನು ಹೊರತೆಗೆಯಲು ಕಷ್ಟ. ಗಿಡ ನಾಟಿಯ ಹಿಂದಿನ ದಿನ ನೀರು ನಿಲ್ಲಿಸಿ. 

ಸತತ ನೆರಳಿನಿಂದ ಬಿಸಿಲಿಗೆ ಸಸಿಗಳಿಗೆ ಹೊಂದಿಕೊಳ್ಳಲು ಸಸಿಗಳಿಗೆ ಸ್ವಲ್ಪ ಸಮಯ ಬೇಕು. ಇದಕ್ಕಾಗಿ, ನಾಟಿಗೆ ಸ್ವಲ್ಪ ಮೊದಲು ಪ್ರೋ ಟ್ರೇಗಳನ್ನು ಬಿಸಿಲಿಗೆ ಒಡ್ಡಿ.  ಇದರಿಂದಾಗಿ ಈ ಗಿಡಗಳು ಬಿಸಿಲಿಗೆ ಹೊಂದಿಕೊಳ್ಳುವ ಶಕ್ತಿ ಪಡೆಯುತ್ತವೆ.  ಕ್ರಮೇಣ ಬಿಸಿಲೂ ಅಭ್ಯಾಸವಾಗುತ್ತದೆ. ಈ ಪ್ರಕ್ರಿಯೆಯನ್ನು ಹಾರ್ಡನಿಂಗ್ ಎನ್ನುತ್ತಾರೆ.                     

ಸಾವಯವ ವಿಧಾನದಲ್ಲಿ, ಸಸಿಗಳಿಗೆ ರೋಗಬಾಧೆ ಬಾರದಂತೆ ಈ ಕೆಳಗಿನ ವಿಧಾನ ಅನುಸರಿಸಬಹುದು. ಲೀಟರಿನಲ್ಲಿ ಹತ್ತು ಮಿ.ಲೀ. ಸೂಡೋಮೊನಾಸ್ ಕರಗಿಸಿ, ಹತ್ತು ದಿನದ ಅಂತರದಲ್ಲಿ ಸಿಂಪಡಣೆ ಮಾಡಬೇಕು. ಸಸಿಗಳ ಮಧ್ಯದಲ್ಲಿ ಸಾಸಿವೆ ಮತ್ತು ಚೆಂಡುಹೂವಿನ ಗಿಡಗಳನ್ನು ನೆಟ್ಟುಕೊಂಡರೆ, ನೈಸರ್ಗಿಕ ಕೀಟನಿಯಂತ್ರಣ ಆಗುತ್ತದೆ. ಒಂದು ಲೀಟರ್ ನೀರಿನಲ್ಲಿ ಐದು ಮಿ.ಲೀ. ಬವೇರಿಯಾ ಕರಗಿಸಿ ಸಿಂಪಡಿಸುವುದೂ ಕೀಟನಿಯಂತ್ರಣಕ್ಕೆ ಒಳ್ಳೆಯದು.

ಅನುಕೂಲತೆಗಳು

ಕಡಿಮೆ ಅವಧಿಯಲ್ಲಿ, ಗುಣಮಟ್ಟದ ಸಸಿ ಅಭಿವೃದ್ಧಿ ಸಾಧ್ಯ. ಕಡಿಮೆ ಬೀಜ ಸಾಕು. ಒಂದೇ ರೀತಿಯ ಬೆಳವಣಿಗೆ ಸಿಗುತ್ತದೆ. ಬೇರುಗಳಿಗೆ ಹಾನಿ ಕಡಿಮೆ. ಸಸ್ಯಾಭಿವೃದ್ಧಿಯಲ್ಲಿ ನೂರಕ್ಕೆ ನೂರು ಯಶಸ್ಸು. ಸ್ಟೆರಿಲೈಜ್ಡ್ ಕೊಕೊ ಪೀಟ್ ಬಳಸಿದರೆ ಮೊಳಕೆಯೊಡೆಯುವ ಪ್ರಕ್ರಿಯೆ ಜಾಸ್ತಿ. ಗಿಡಗಳನ್ನು ದೂರಕ್ಕೆ ಸಾಗಿಸಬಹುದು. ಗಿಡಗಳ ಆರೈಕೆ, ಪೋಷಣೆ ಸುಲಭ. ಸಾರಜನಕ ಒದಗಿಸಿಕೊಡುವ ನೆಲಕಡಲೆ, ಹರಳುಹಿಂಡಿ, ಬೇವಿನ ಹಿಂಡಿ ಬಳಸಬಹುದು. ಪೊಟ್ಯಾಶಿಯಂ ಸತ್ವಕ್ಕಾಗಿ ಮರದ ಬೂದಿ ಒಳ್ಳೆಯದು. ಎರೆಹುಳ ಕಾಂಪೋಸ್ಟೂ ಉತ್ತಮ.

ಲವ್ಲಿ ಆಗಸ್ಟಿನ್ ಈ ಕಾರ್ಯಾಗಾರವನ್ನು ಬಹು ಚೆನ್ನಾಗಿ ನಡೆಸಿಕೊಟ್ಟರು. ನಮಗೂ ಮುಂದೆ  ಪ್ರೋಟ್ರೇ ಬಳಸಿ, ಮನೆಗಳಲ್ಲಿಯೇ ಬೇಕಾದ ತರಕಾರಿ ಗಿಡಗಳನ್ನು ಅಭಿವೃದ್ಧಿಪಡಿಸಿಕೊಳ್ಳಬಹುದು ಎಂಬ ವಿಶ್ವಾಸ ಹುಟ್ಟಿತು. ಈ ಕ್ರಮದಲ್ಲಿ ಆದೇಶದ ಮೇರೆಗೆ ತರಕಾರಿ ಗಿಡ ಬೆಳೆಸಿ ಮಾರಾಟ ಮಾಡುವ ಸ್ವ ಉದ್ಯೋಗವನ್ನೂ ಆರಂಭಿಸಬಹುದು. ಇದಕ್ಕೂ ಕರಾವಳಿ ಕರ್ನಾಟಕದಲ್ಲಿ ಒಳ್ಳೆಯ ಅವಕಾಶವಿದೆ.

(ಭಾಗ್ಯಲಕ್ಷ್ಮಿ ಭಿಡೆ ಮಂಗಳೂರಿನ ನಿವಾಸಿ. ಕೈ ತೋಟ ಹವ್ಯಾಸ. ಕಳೆದ ಮೂರು ವರ್ಷಗಳಿಂದ ಊಟಕ್ಕೆ ತಮ್ಮದೇ ಸಾವಯವ ತರಕಾರಿ - hagyalakshmibhide@gmail.com)