ADD

Back To Free Articles

February-2019

ಆ ಐದು ದಿನಗಳು..

ಶಿಬಿರಾರ್ಥಿಗಳು ಮತ್ತು ಶಿಬಿರ ನಿರ್ದೇಶಕರ ನಡುವೆ ಕುಟುಂಬ ಬಾಂಧವ್ಯ ಮೂಡದೆ ಇಂಥ ಕಾರ್ಯಕ್ರಮ ಯಶಸ್ವಿಯಾಗದು. ಈ ಉದ್ದೇಶದಿಂದ ಪರಸ್ಪರ ಪರಿಚಯಕ್ಕೆ ಹೆಚ್ಚಿನ ಒತ್ತು ಕೊಟ್ಟೆವು. ಪ್ರತಿ ಶಿಬಿರಾರ್ಥಿಯೂ ಮರ ಏರುವ ಕ್ರಮ, ಏರುವಾಗ ಮಾಡುವ ತಪ್ಪುಗಳು, ಪಾಲಿಸಬೇಕಾದ ಜಾಗ್ರತೆಗಳನ್ನು ಶಿಕ್ಷಕರು ತಪ್ಪದೆ ತಿಳಿಸುವಂತೆ ನವಿರಾಗಿ ಸೂಚಿಸುತ್ತಿದ್ದೆ. ಥರದ ವೈಯುಕ್ತಿಕ ಗಮನದಿಂದಾಗಿ ಮರ ಏರಿ ಅಭ್ಯಾಸವೇ ಇಲ್ಲದಿದ್ದವರೂ ಮಧ್ಯಾಹ್ನದ ವೇಳೆಗೆ ಆ ವಿದ್ಯೆಯನ್ನು ಕಲಿತುಕೊಂಡರು.

ಲೇ : ಶಂನಾ ಖಂಡಿಗೆ

 
no image
 

ತಿಂಗಳುಗಳ ಹಿಂದೆ ತೀರ್ಥಹಳ್ಳಿಯ `ಎಲೈಟ್ ಗ್ರೂಪಿ'ನ ಕೃಷಿಕರಿಗೆ ಅಡಿಕೆ ಮರ ಹತ್ತುವ ತರಬೇತಿ ನೀಡಿದರೆ ಹೇಗೆ ಎಂಬ ಯೋಚನೆ ಬಂತು.  ಅವರು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯ ಮತ್ತಿತರರ ಜೊತೆಗೂಡಿದರು.  `ಕೊನೆಗಾರ' ಹೆಸರಿನಲ್ಲಿ ಅಡಿಕೆ ಮರವೇರುವ ತರಬೇತಿ ಶಿಬಿರ ಆಯೋಜಿಸಿದರು. ಇದು ನಡೆದದ್ದು ತೀರ್ಥಹಳ್ಳಿಯಲ್ಲಿ,  ಅಕ್ಟೋಬರಿನಲ್ಲಿ. ಶಿಬಿರ ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು!

ಈ ಶಿಬಿರದ ಬಗ್ಗೆ ಕುತೂಹಲದಿಂದ ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೆಯವರು ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರರೊಡನೆ ಸಮಾಲೋಚಿಸಿದ್ದರು.  ನಮ್ಮ ಒಂದು ತಂಡ `ಕೊನೆಗಾರ' ಶಿಬಿರ ನೋಡಲು ಧಾವಿಸಿದೆವು. ಅದು ಸಮಾರೋಪದ ದಿನ.   ಶ್ರೀ ಪಡ್ರೆ, ಸಾಧಕ ಕೃಷಿಕ ಪಡಾರು ರಾಮಕೃಷ್ಣ ಶಾಸ್ತ್ರಿ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಡಾ| ಕೇಶವ ಭಟ್ ಮತ್ತು ಕ್ಯಾಂಪ್ಕೋ ಉಪಾಧ್ಯಕ್ಷನಾದ ನಾನು. ನಾವು ತರಬೇತಿಯನ್ನು ಕಣ್ಣಾರೆ ಕಂಡು, ಎಲ್ಲರೊಡನೆಯೂ ವಿಚಾರ ವಿನಿಮಯ ಮಾಡಿದೆವು. ಹಿಂದೆ ಬರುತ್ತಲೇ ಕರಾವಳಿಯಲ್ಲಿಯೂ ಇಂತಹ ಶಿಬಿರ ಆಯೋಜಿಸುವ ರೂಪುರೇಷೆ ಹಾಕಿಕೊಂಡೆವು. 

ಅಡಿಕೆ ಮರ ಹತ್ತುವ ತರಬೇತಿ ಎಲ್ಲರಿಗೂ ಹೊಸತೇ. ಅದು ದೊಡ್ಡ ಜವಾಬ್ದಾರಿ. ಸಾಕಷ್ಟು ಪೂರ್ವಸಿದ್ಧತೆಗಳಿಲ್ಲದೆ ನಿರ್ವಹಿಸುವಂತಿಲ್ಲ. ಕ್ಯಾಂಪ್ಕೋ ಅಧ್ಯಕ್ಷರ ನೇತೃತ್ವದ ತಂಡ  ಸಿಪಿಸಿಆರ್‍ಐ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ತೋಟಗಾರಿಕಾ ಇಲಾಖೆ, ಅಡಿಕೆ ಪತ್ರಿಕೆ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಮತ್ತು ಅನೇಕ ಪ್ರಗತಿಪರ ಕೃಷಿಕರನ್ನು ಜೊತೆಗೂಡಿಸಿತು. ಹಲವು ಸಮಾಲೋಚನಾ ಸಭೆ ನಡೆಸಿತು. ಚರ್ಚೆಗಳಾದವು. ತರಬೇತಿಯಲ್ಲಿ ನೀಡಬೇಕಾದ ಶಿಕ್ಷಣದ  ಬಗ್ಗೆಯೂ ತೀರ್ಮಾನಗಳಾದವು. ಸಭೆ ನನ್ನನ್ನು ಶಿಬಿರ ನಿರ್ದೇಶಕನಾಗಿಯೂ, ಕ್ಯಾಂಪ್ಕೋದ ಕಿಶನ್ ಪಳ್ಳತಡ್ಕ ಅವರನ್ನು ಸಹಾಯಕ್ಕೂ ನಿಯೋಜಿಸಿತು. ಎಲ್ಲರದೂ ಪೂರ್ಣ ಬೆಂಬಲ. ಶ್ರೀ ಪಡ್ರೆಯವರಂತೂ ಕ್ಯಾಂಪ್ಕೋ ಜೊತೆಗಿದ್ದು ಎಲ್ಲ ವ್ಯವಸ್ಥೆಗಳಿಗೆ ಹೆಗಲಾದರು.

ಒಟ್ಟು 30 ಜನ ಶಿಬಿರಾರ್ಥಿಗಳು.  ಶಿಕ್ಷಕರಾಗಿ ನಮ್ಮೂರಿನ ಐವರು ನುರಿತ ಕೊಯ್ಲು ಕಾರ್ಮಿಕರು. ಶಿಕ್ಷಕರು ಏನನ್ನೆಲ್ಲಾ ಕಲಿಸಬೇಕೆಂದು ತಿಳಿಸಿಕೊಡುತ್ತಾ, ಪಾಠಗಳ ಮೇಲ್ನೋಟ ವಹಿಸಲು ಕೃಷಿಕ ಕೊಯ್ಲುಗಾರರೊಬ್ಬರನ್ನು ಮುಖ್ಯ ಶಿಕ್ಷಕರಾಗಿ ಆಯ್ದುಕೊಂಡೆವು. ಶಿಬಿರ ಪೂರ್ತಿ ವಸತಿಯುಕ್ತ ಆಗಿದ್ದರಷ್ಟೇ ಶ್ರದ್ಧೆಯಿಂದ ಹೆಚ್ಚಿನ ಕಲಿಕೆ ಸಾಧ್ಯ. 5 ಡಿಸೆಂಬರ್ 2018ರಿಂದ 9 ಡಿಸೆಂಬರ್ 2018ರ ವರೆಗೆ ವಿಟ್ಲ ಸಿಪಿಸಿಆರ್‍ಐಯಲ್ಲಿ ಪಂಚದಿನ ತರಬೇತಿ. ಕ್ಯಾಂಪ್ಕೋ ವತಿಯಿಂದ ಉಚಿತ ವಸತಿ, ಊಟೋಪಚಾರ.  ಜೊತೆಗೆ ಪ್ರತಿಯೊಬ್ಬರಿಗೂ ರೂ. 5 ಲಕ್ಷದ ಅಪಘಾತ ವಿಮೆ, ಶಿಬಿರಾರ್ಥಿಗೆ 500 ರೂ. ದೈನಂದಿನ  ಶಿಷ್ಯವೇತನ, ಔದ್ಯಮಿಕ ಹೆಲ್ಮೆಟ್, ಸಮವಸ್ತ್ರ, ರಕ್ತ ವರ್ಗೀಕರಣ ದಾಖಲೆ ಮತ್ತು ವಿಳಾಸಗಳಿರುವ ಗುರುತು ಚೀಟಿ, ಪ್ರಮಾಣಪತ್ರ.  ತರಬೇತಿ  ಶಿಬಿರಕ್ಕೆ `ಅಡಿಕೆ ಕೌಶಲ್ಯ ಪಡೆ'  ಎಂಬ ಹೆಸರಿಟ್ಟೆವು. ಈ ಹೆಸರಲ್ಲೇ ನಮ್ಮಗಳ ಒಂದು ವಾಟ್ಸಪ್ ಗುಂಪು ತೆರೆದೆವು.

ನೂರಕ್ಕೂ ಹೆಚ್ಚು ಅರ್ಜಿ

ತರಬೇತಿಗೆ 18 ವರ್ಷದಿಂದ 35 ರೊಳಗಿನ ಯುವಕರಿಗೆ ಆದ್ಯತೆ. ಕೇರಳದ ಕಾಸರಗೋಡು ಮತ್ತು ಕರ್ನಾಟಕದ ದಕ್ಷಿಣ ಕನ್ನಡ ಭಾಗದ ಯುವಕರಿಗೆ ಪ್ರಾಶಸ್ತ್ಯ ಎಂಬುದು ನಮ್ಮ ನಿಲುವಾಗಿತ್ತು. ಅರ್ಜಿ ನಮೂನೆಯನ್ನು ಕ್ಯಾಂಪ್ಕೋ ಶಾಖೆಗಳಲ್ಲಿ ಸಿಗುವಂತೆ ಮಾಡಿದೆವು. ಅರ್ಜಿ ತುಂಬಿಸಿ ಆಧಾರ್ ನಕಲು ಪ್ರತಿ, ಭಾವಚಿತ್ರ ಲಗತ್ತಿಸಿ ಮತ್ತೆ ಅದೇ ಶಾಖೆಯಲ್ಲಿ ಸಲ್ಲಿಸುವಂತೆ ಸೂಚನೆ ಕೊಟ್ಟೆವು.

ಆರಂಭದ ಹತ್ತು ದಿನಗಳಲ್ಲಿ ಬಂದ ಅರ್ಜಿಗಳ ಸಂಖ್ಯೆ ನಿರಾಶಾದಾಯಕ. ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ, ಪತ್ರಿಕೆಗಳಲ್ಲಿ ವ್ಯಾಪಕ ಪ್ರಚಾರ ನೀಡಿದೆವು. ಅರ್ಜಿಗಳು ಜೋರಾಗಿ ಬರಲಾರಂಭಿಸಿದವು. ಮೂವತ್ತು ಅವಕಾಶಗಳಿಗೆ ಬಂದ  ಅರ್ಜಿಗಳು ನೂರಕ್ಕೂ ಹೆಚ್ಚು! ಅರ್ಜಿಗಳಲ್ಲಿ 50 ವರ್ಷ ಮೀರಿದ ಕೃಷಿಕರವೂ ಇದ್ದವು. ಕೊನೆಯ ದಿನಾಂಕದ ನಂತರವೂ ದೂರವಾಣಿ ಕರೆಗಳು. ಕರೆ ಮಾಡಿದವರಲ್ಲಿ 40 - 50 ದಾಟಿದ ಕೃಷಿಕರು ಅನೇಕರಿದ್ದರು. ಅಚ್ಚರಿ ಹುಟ್ಟಿಸಿದ್ದು ಯುವತಿಯರ ಕರೆ. ``ಕೇವಲ ಯುವಕರಿಗೆ ತರಬೇತಿ ನೀಡುತ್ತಿದ್ದೀರಿ, ಯುವತಿಯರಿಗೆ ಯಾವಾಗ ತರಬೇತಿ'' ಎಂಬ ಪ್ರಶ್ನೆ.

ಆಯ್ಕೆಯಲ್ಲಿ ಕನಿಷ್ಠ ವಯೋಮಾನದ, ಅಂದರೆ, 25ರ ಒಳಗಿನ ಯುವಕರಿಗೆ ಆದ್ಯತೆ ಕೊಟ್ಟೆವು.  ಮರ ಹತ್ತಿ ಅಭ್ಯಾಸವೇ ಇಲ್ಲದವರನ್ನೂ ಪರಿಗಣಿಸಿದೆವು. ಸ್ವಾವಲಂಬನೆ ಮತ್ತು ಸ್ವ-ಉದ್ಯೋಗಕ್ಕಾಗಿ ಮುಂದೆ ಬಂದ ಎಳೆಯರಿಗೂ ಅವಕಾಶ ಕೊಟ್ಟೆವು. ಆಯ್ಕೆಯಾದವರಲ್ಲಿ 25ರ ಕೆಳಗಿನವರೇ 20 ಮಂದಿ! ಉಳಿದವರು 28 - 30ರ ಶ್ರೇಣಿಯವರು. ಅಂತಿಮ 30 ರಲ್ಲಿ ಶೇಕಡಾ ಎಂಭತ್ತೂ 28ರ ಒಳಗಿನವರು!

ಫಾಲ್ ಅರೆಸ್ಟರ್ ಅಳವಡಿಕೆ

ಶಿಬಿರಕ್ಕೆ ಬೇಕಾದ ಪರಿಕರಗಳನ್ನು ಮೊದಲೇ ಸಿದ್ಧಪಡಿಸಿದ್ದೆವು. ಶಿಬಿರಾರ್ಥಿ ಮತ್ತು  ಶಿಕ್ಷಕರಿಗೆ `ಕೊಟ್ಟೆಮಣೆ', ಜೀವವಿಮೆ ಪಾಲಿಸಿಗೆ ಬೇಕಾದ ಕಾಗದಪತ್ರಗಳು, ಸಮವಸ್ತ್ರ ಮತ್ತು ಹೆಲ್ಮೆಟ್  ಇವುಗಳಲ್ಲಿ ಸೇರಿದ್ದವು. `ತಳೆ' ಕಟ್ಟಲು ಬೇಕಾದ ಗೋಣಿಚೀಲ, ಕೊಕ್ಕೆ ಕಟ್ಟಲು ಸೂಕ್ತ ಬಿದಿರು, ಕೊಕ್ಕೆ - ಕೊಟ್ಟೆಮಣೆಗೆ ಬೇಕಾದ ನೈಲಾನ್ ಹಗ್ಗಗಳು ಎಲ್ಲವೂ ಮುಂಚಿತವಾಗಿಯೇ ರೂಢಿಸಿದ್ದೆವು.  ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕೃಷಿ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಶಶಿಧರರ ನೇತೃತ್ವದಲ್ಲಿ ಹಿಂದಿನ ಸಂಜೆಯೇ ಸುರಕ್ಷಾ ಕ್ರಮ ಅಳವಡಿಸಿದ ವೇದಿಕೆ ಸಿದ್ಧಗೊಂಡಿತ್ತು. ಏರಬೇಕಾದ ಅಡಿಕೆ ಮರದ ಬುಡದ ಇಕ್ಕೆಲಗಳಲ್ಲಿ ಎರಡು ನೆಟ್ ಕಟ್ಟಿದ್ದೆವು. ಒಬ್ಬರು  ಶಿಕ್ಷಕರು ಈ ಅಡಿಕೆ ಮರಕ್ಕೆ ಏರಿ ಎತ್ತರದಲ್ಲಿ  ಹಗ್ಗದಿಂದ `ಕರಡಿ ಗುಲೆ'  ಕಟ್ಟ ಹಾಕಿ ಆ ಹಗ್ಗವನ್ನು ಇಳಿಬಿಟ್ಟಿದ್ದರು. ಇದಕ್ಕೆ  ಸುರಕ್ಷಾ ಸಾಧನ `ಫಾಲ್ ಅರೆಸ್ಟರ್' ಅಳವಡಿಸಿದ್ದೆವು.

ಪೂರ್ವಭಾವಿ ಸಿದ್ಧತೆ

ಮೊದಲ ದಿನ ಬೆಳಗ್ಗೆ ಉದ್ಘಾಟನೆ. ಮಧ್ಯಾಹ್ನ ನಂತರ  ವೈದ್ಯಕೀಯ  ಪರೀಕ್ಷೆ, ರಕ್ತದ ಗುಂಪಿನ ವರ್ಗೀಕರಣ. ನಂತರ ಗುರುತಿನ ಕಾರ್ಡಿಗಾಗಿ ಶಿಬಿರಾರ್ಥಿ ಮತ್ತು ಶಿಕ್ಷಕರ ಭಾವಚಿತ್ರೀಕರಣ. ಶಿಬಿರಾರ್ಥಿಗಳು ಮತ್ತು ಶಿಬಿರ ನಿರ್ದೇಶಕರ ನಡುವೆ ಕುಟುಂಬ ಬಾಂಧವ್ಯ ಮೂಡದೆ ಇಂಥ ಕಾರ್ಯಕ್ರಮ ಯಶಸ್ವಿಯಾಗದು. ಈ ಉದ್ದೇಶದಿಂದ ಪರಸ್ಪರ ಪರಿಚಯಕ್ಕೆ ಹೆಚ್ಚಿನ ಒತ್ತು ಕೊಟ್ಟೆವು.  ಶಿಬಿರಾರ್ಥಿಗಳು ಐದೂ ದಿನ ಪಾಲಿಸಬೇಕಾದ ನೀತಿನಿಯಮಗಳನ್ನು ನಾನು ಹೇಳಿಕೊಟ್ಟೆ. ಇದಾದ ನಂತರ ಆತ್ಮೀಯ ಸಂವಾದ ನಡೆಸಿದೆವು.

`ತಳೆ' ತಯಾರಿಯಿಂದ ಆರಂಭ

ಎರಡನೆಯ ದಿವಸದಿಂದ ಪೂರ್ಣಪ್ರಮಾಣದ ಕ್ಷೇತ್ರ ತರಬೇತಿ. ಐದು ಶಿಕ್ಷಕರಿಗೂ ಆರಾರು ಶಿಷ್ಯರನ್ನು ಕೊಟ್ಟೆವು.  ಮೊದಲು ಶಿಕ್ಷಕರಿಂದ ತಳೆ ತಯಾರಿಯ ಪ್ರಾತ್ಯಕ್ಷಿಕೆ. ಪ್ರತಿಯೊಬ್ಬ ಶಿಬಿರಾರ್ಥಿಯೂ ಅದನ್ನು ನೋಡಿ ಸಲೀಸಾಗಿ ತಳೆ ಕಟ್ಟಿಬಿಟ್ಟರು. 

ಅಡಿಕೆ ಮರ ಹತ್ತುವಾಗ ಬಳಸುವ ಇನ್ನೊಂದು ಸಾಧನ `ಕೊಟ್ಟೆಮಣೆ'.  ಮುಖ್ಯವಾಗಿ ಕೊಯ್ಲಿನ ಸಮಯದಲ್ಲಿ ಮರದಲ್ಲಿ `ಕೊಟ್ಟೆಮಣೆ'ಯಲ್ಲಿ ಕುಳಿತು ಕೆಲಸ ನಿರ್ವಹಿಸುವುದು ರೂಢಿ. ಮಳೆಗಾಲದಲ್ಲಿ ಈ ಮಣೆಯ ಹಗ್ಗ ಬಳಸಿದರೆ ಮರ ಏರಲು ಬಿಗಿ ಸಿಗುತ್ತದೆ. ಚೆನ್ನಾಗಿ ಅಭ್ಯಾಸ ಆದವರಿಗೆ ಬೇಸಿಗೆಯಲ್ಲಿ ಇದರ ಅಗತ್ಯವಿಲ್ಲ. ಸುರಕ್ಷತೆಯ ದೃಷ್ಟಿಯಿಂದ ಶಿಬಿರಾರ್ಥಿಗಳಿಗೆ ನಾವಿದನ್ನು ಕಡ್ಡಾಯವಾಗಿಸಿದ್ದೆವು. `ಕೊಟ್ಟೆಮಣೆ'ಗೆ ಹಗ್ಗ ಹಾಕುವ ಕ್ರಮ, ಹಗ್ಗದ ಗಂಟುಗಳ ಜೋಡಣೆ, ಗಂಟುಗಳಿಗೆ ಮತ್ತೆ ಸಣ್ಣ ಹಗ್ಗದಿಂದ ಬಿಗಿಯಾಗಿ ಸುತ್ತುವ ಕ್ರಮಗಳನ್ನೂ ಶಿಕ್ಷಕರು ಹೇಳಿಕೊಟ್ಟರು.

ಮುಂದಿನದೇ ಅತಿ ಪ್ರಮುಖ ಹಂತ. ಮರ ಏರುವುದು. ಕೊಟ್ಟೆಮಣೆಯ ಬದಲಿಗೆ ಡಾ| ಶಶಿಧರ್ ಬೇರೆಬೇರೆ ಸಾಹಸಗಳಿಗೆ ಉಪಯೋಗವಾಗುವ ಸುರಕ್ಷಾ ಸಾಧನಗಳನ್ನು ಜೋಡಿಸಿಕೊಟ್ಟಿದ್ದರು. ಅದರಂತೆ, ಮರ ಏರುವವರು ಒಂದು `ಬಾಡಿ ಬೆಲ್ಟ್' ಧರಿಸಬೇಕು. ಈ ಬೆಲ್ಟಿನ ಹುಕ್ ಅನ್ನು ಕೊಟ್ಟೆಮಣೆಯ ಬಳ್ಳಿಗೆ ಸೇರಿಸಿಕೊಂಡರೆ ಸಾಕು.  ಮರ ಏರಿ ಕೊಯ್ಲು - ಸಿಂಪಡಣೆ ಮಾಡುವಾಗ ಹೆಚ್ಚು ಸುರಕ್ಷತೆ ಸಿಗುತ್ತದೆ. ಡಾ. ಶಶಿಧರ್ ಈ ಅಂಶವನ್ನು ಮೊದಲಿಗೆ ಶಿಕ್ಷಕರಿಗೆ ಪ್ರಾಯೋಗಿಕವಾಗಿ ಮನದಟ್ಟು ಮಾಡಿಕೊಟ್ಟರು.  ಅನಂತರ ಶಿಬಿರಾರ್ಥಿಗಳಿಗೂ ಇದು ಸ್ಪಷ್ಟವಾಯಿತು.

ಮೂವತ್ತು ಶಿಬಿರಾರ್ಥಿಗಳಲ್ಲಿ ಏಳು ಮಂದಿಗೆ ಒಮ್ಮೆಯೂ ಅಡಿಕೆ ಮರ ಹತ್ತಿ ಗೊತ್ತಿರಲಿಲ್ಲ. ಉಳಿದವರಲ್ಲಿ ಹಲವರು ಸಣ್ಣಪುಟ್ಟ ಮರಗಳಿಗೆ ಹತ್ತಿಳಿದವರಿದ್ದರು. ಕೆಲವರಿಗೆ ಮಾತ್ರ ಹೆಚ್ಚಿನ ಅನುಭವ ಇತ್ತು. ಇಂಥವರು ಮರ ಹತ್ತುವ ಮಟ್ಟುಗಳನ್ನು ಪೂರ್ತಿ ಕಲಿತು ವೃತ್ತಿ ಮಾಡುವ ಉದ್ದೇಶದಿಂದ ಬಂದಿದ್ದರು. ಮರ ಹತ್ತುವಾಗ ಕಾಲಿಗೆ `ತಳೆ' ಹಾಕಿಕೊಳ್ಳುವ ಕ್ರಮ, ಕೊಟ್ಟೆಮಣೆಯ ಹಗ್ಗವನ್ನು ಅಡಿಕೆ ಮರಕ್ಕೆ ಸುತ್ತುವ ಕ್ರಮ, ಕೊಟ್ಟೆಮಣೆ ಬಳ್ಳಿ ಸಡಿಲಿಸಿ ಹಿಡಿದುಕೊಂಡು ಮರವೇರಿದ ಹಾಗೆ ಕೈಗಳನ್ನು ಅಡಿಕೆ ಮರಕ್ಕೆ ಜೋಡಿಸುವ ರೀತಿ, ಏರುವಾಗ ಪಾದಗಳ ಸಹಾಯದಿಂದ ದೇಹವನ್ನು ಆಧರಿಸುವ ಕ್ರಮ, ಕೊಟ್ಟೆಮಣೆಯಲ್ಲಿ ಕುಳಿತುಕೊಳ್ಳುವಾಗ ಜಾರದಂತೆ ಎಚ್ಚರ, ಕುಳಿತುಕೊಳ್ಳುವ ರೀತಿ,  ನಂತರ ಕೊಟ್ಟೆಮಣೆಯಿಂದ ಇಳಿದು ಅದರ ಹಗ್ಗ ಸಡಿಲಿಸಿ ಕೆಳಗೆ ಇಳಿಯುವಾಗ ಕೈಕಾಲು ಹೇಗಿರಬೇಕು, ಯಾವ ಶರೀರದ ಭಾಗಗಳನ್ನು ಅಡಿಕೆ ಮರಕ್ಕೆ ಆಧರಿಸಬಾರದು  - ಇಂತಹ ಹತ್ತು ಹಲವು ಸೂಕ್ಷ್ಮಗಳನ್ನು ಶಿಕ್ಷಕರು ಡೆಮೋ ಮೂಲಕ ಹೇಳಿಕೊಟ್ಟರು.  ಪ್ರತಿ ಶಿಬಿರಾರ್ಥಿಯೂ ಮರ ಏರುವ ಕ್ರಮ, ಏರುವಾಗ ಮಾಡುವ ತಪ್ಪುಗಳು, ಪಾಲಿಸಬೇಕಾದ ಜಾಗ್ರತೆಗಳನ್ನು ಶಿಕ್ಷಕರು ತಪ್ಪದೆ ತಿಳಿಸುವಂತೆ ನವಿರಾಗಿ ಸೂಚಿಸುತ್ತಿದ್ದೆ. ಈ ಥರದ ವೈಯುಕ್ತಿಕ ಗಮನದಿಂದಾಗಿ ಮರ ಏರಿ ಅಭ್ಯಾಸವೇ ಇಲ್ಲದಿದ್ದವರೂ ಮಧ್ಯಾಹ್ನದ ವೇಳೆಗೆ ಆ ವಿದ್ಯೆಯನ್ನು ಕಲಿತುಕೊಂಡರು. 

ತಂಡಗಳ ಶಿಕ್ಷಕರನ್ನು ಪ್ರತಿದಿನ ಬದಲಿಸಿದೆವು. ಶಿಕ್ಷಕರಲ್ಲಿನ ಬೇರೆ ಬೇರೆ ಅನುಭವಗಳು ಎಲ್ಲರಿಗೂ ಸಿಗಲಿ ಎನ್ನುವುದೇ ಇದರ ಆಶಯ. ಅಡಿಕೆ ಮರ ಏರುವಾಗ ಮರ್ಮಾಂಗಕ್ಕೆ ಹಾನಿಯಾಗದಂತೆ ಹಾಳೆಯಿಂದ ನಿರ್ಮಿಸುವ ಸೆಂಟರ್ ಪ್ಯಾಡ್ ನೀವು ನೋಡಿರಬೇಕು. ಅದರ ತಯಾರಿಯ ಕ್ರಮವನ್ನೂ ಹೇಳಿಕೊಟ್ಟೆವು. ಶಿಬಿರಾರ್ಥಿಗಳು ತಮಗೆ ಬೇಕಾದ ಸೆಂಟರ್ ಪ್ಯಾಡುಗಳನ್ನು ತಾವೇ ನಿರ್ಮಿಸಿಕೊಂಡರು. ಅಡಿಕೆ ಮರಕ್ಕೆ ಹತ್ತಿ ಔಷಧ ಸಿಂಪಡಣೆ ಮಾಡುವಾಗ ಪಾಲಿಸಬೇಕಾದ ಜಾಗ್ರತೆ, ಪ್ರತಿಯೊಂದು ಗೊನೆಗೆ ಔಷಧ ಬೀಳಿಸುವ ಕ್ರಮ, ಸಿಂಪಡಣೆಯ ಹಂತದಲ್ಲಿ ಲಾನ್ಸರ್ ಹಿಡಿದುಕೊಳ್ಳುವ ಕ್ರಮ, ಕೊಟ್ಟೆಮಣೆಯಲ್ಲಿ ಕುಳಿತು ಸಿಂಪಡಣೆ ಮಾಡುವಾಗ ಸುತ್ತಲೂ ತಿರುಗುವ ಅಭ್ಯಾಸವನ್ನೂ ಹೇಳಿಕೊಟ್ಟೆವು. ಪ್ರತಿಯೊಬ್ಬ ಶಿಬಿರಾರ್ಥಿಯಲ್ಲಿ ಅಡಿಕೆ ಗೊನೆಗಳಿಗೆ ಸಿಂಪಡಣೆ ಮಾಡಿಸಿದೆವು. 

 ಪ್ರತಿ ದಿನ ಮರ ಏರುವ ಅಭ್ಯಾಸ ಮುಂದುವರಿದಿತ್ತು. ನಾಲ್ಕನೆಯದು ಕೊಯ್ಲಿನ ದಿನ. ಕೊಯ್ಲಿಗೆ ಕೊಕ್ಕೆ, ಕೊಕ್ಕೆಗೆ ಹಲ್ಲು ಬೇಕು. ಅಡಿಕೆ ಮರದ ಸಲಿಕೆಗಳಿಂದ ಹಲ್ಲು ತಯಾರಿಸುವ ಕ್ರಮ ತೋರಿಸಿಕೊಟ್ಟೆವು.  ಪ್ರತಿ ಶಿಬಿರಾರ್ಥಿಯ ಕೊಕ್ಕೆಗೆ ಅವನೇ ಮಾಡಿಕೊಂಡ ಹಲ್ಲು ಸೇರಿಕೊಂಡಿತು. ಅಡಿಕೆ ಕೊಯ್ಲಿನ ಕೊಕ್ಕೆ ಹೇಗಿರಬೇಕು, ಅದು ಎಷ್ಟು ಉದ್ದ ಇದ್ದರೆ ಅನುಕೂಲ ಎಂಬುದನ್ನೆಲ್ಲ ತಿಳಿಹೇಳಿದೆವು.  ಶಿಬಿರಾರ್ಥಿ ಒಂದೊಂದು ಹಣ್ಣಡಿಕೆ ಗೊನೆಗಳನ್ನು ಕೊಯ್ದರು. ಮರಕ್ಕೆ ಹತ್ತುವಾಗ ಕೊಕ್ಕೆಯನ್ನು ಸೊಂಟದ ಕೊಂಡಿಗೆ ಸಿಕ್ಕಿಸುವ ಕ್ರಮ, ಕೊಕ್ಕೆಯನ್ನು ಮರದಲ್ಲಿ ಹಿಡಿದು ಅಡಿಕೆ ಗೊನೆಯ ಯಾವ ಭಾಗಕ್ಕೆ ಸಿಕ್ಕಿಸಿ ಎಳೆಯಬೇಕು, ಗೊನೆ ಕೊಯ್ಯುವಾಗ ಕೊಯ್ಲುಗಾರ ಯಾವ ಪೊಸಿಶನಿನಲ್ಲಿ ಇರಬೇಕು, ಮೈಮೇಲೆ ಗೊನೆ ಬೀಳದಂತೆ ತಪ್ಪಿಸುವ ಜಾಣ್ಮೆ, ಕೊಯ್ದ ಗೊನೆಗಳು ಕೊಕ್ಕೆಯಲ್ಲೇ ಜಾರಿ ಇಳಿದಾಗ ಅದನ್ನು ತಪ್ಪಿಸುವ ತಂತ್ರಗಳನ್ನೂ ಶಿಕ್ಷಕರು ಚೆನ್ನಾಗಿ ತಿಳಿಸಿಕೊಟ್ಟರು.

ಶಿಬಿರಾರ್ಥಿಗಳಿಗೆ ಬೆಳಿಗ್ಗೆ 9 ರಿಂದ 1 ರ ವರೆಗೆ ತೋಟದಲ್ಲಿ ಕಲಿಕೆಗಳಿದ್ದುವು. ಅಪರಾಹ್ಣ ಆರ್ಥಿಕ ಸಾಕ್ಷರತೆ, ದೈಹಿಕ - ಶಾರೀರಿಕ ಆರೋಗ್ಯ ಕಾಪಾಡಿಕೊಳ್ಳುವ ಬಗೆ, ನೀತಿ ಪಾಠ, ಉಳಿತಾಯ ಮಾಡಲು ಸಲಹೆ, ಅಡಿಕೆ ಕೊಯ್ಲು ಮಾಡಿಯೇ ಬದುಕಿನ ಮೆಟ್ಟಲೇರಿದವರ ಯಶೋಗಾಥೆ, ಪ್ರಥಮ ಚಿಕಿತ್ಸೆ ಮುಂತಾದ  ಮಾನವ ಸಂಪನ್ಮೂಲ ತರಗತಿಗಳು.

ಕೊನೆಯ ದಿನ ಹಿಂದಿನ ದಿನಗಳಲ್ಲಿ ಕಲಿತುದರ ಪುನರ್ಮನನ. ಮರ ಹತ್ತುವ, ಕೊಕ್ಕೆಗೆ ಹಲ್ಲು ಕಟ್ಟುವ ಸ್ಪರ್ಧೆಗಳನ್ನೂ ಆಯೋಜಿಸಿದ್ದೆವು. ಅಪರಾಹ್ಣ ಸಮಾರೋಪ.    

**********    

ಲೇಖಕರು ಕ್ಯಾಂಪ್ಕೋ ಉಪಾಧ್ಯಕ್ಷರು; ಅಡಿಕೆ ಕೌಶಲ್ಯ ಪಡೆ ತರಬೇತಿಯ ಶಿಬಿರ ನಿರ್ದೇಶಕರು.

ಸಂಪರ್ಕ - 99464 06321