ADD

Back To Free Articles

February-2019

ಅಮ್ಟಾಂಗೆಯ ಅಕಾಲ `ಗುಜ್ಜೆ ಮರ'

ಒಂದು ಹಲಸಿನ ಮರದಿಂದ ಲಕ್ಷ ರೂಪಾಯಿಗಿಂತಲೂ ಹೆಚ್ಚು ಆದಾಯ ಪಡೆದವರು ದಕ್ಷಿಣ ಕನ್ನಡ, ಏಕೆ ಮಲೆನಾಡಿನ ಕೃಷಿಕರಲ್ಲೇ ಬಹಳ ಇರಲಾರರು. ಏನಂತೀರಿ?

ಲೇ:  ಅಪ ಬಳಗ

 
no image
 

ಪ್ಪಿನಂಗಡಿ ಬಳಿಯ ಕೃಷಿಕ ರವಿಚಂದ್ರ ಜೇಸೀಬಿ ತರಿಸಿ ಅಂಗಳ ವಿಸ್ತಾರ ಮಾಡಿದ್ದು 2005ರಲ್ಲಿ. ಆಗ ಈ ಕೆಲಸಕ್ಕಾದ ಖರ್ಚು 1,15,000 ರೂ. ಈಚೀಚೆಗೆ ಅವರು ಒಮ್ಮೊಮ್ಮೆ, ``ಆ ಕೆಲಸದ ಖರ್ಚು ನನಗೆ ಬಹುತೇಕ ಹಿಂದೆ ಬಂದಿದೆ'' ಎಂದು ಹೇಳುವುದುಂಟು! ಇದು ಹೇಗೆ?

ಅಂಗಳ ವಿಸ್ತರಿಸಿದಾಗ ಅದರಂಚಿನ ಹೊಂಡದಲ್ಲಿದ್ದ ಹಳೆ ಹಲಸಿನ ಮರಕ್ಕೆ ಹತ್ತಡಿ ಮಣ್ಣು ಪೇರಿಸಿದಂತಾಯಿತು. ಪ್ರಕೃತಿಯ ವರ ಎನ್ನಿ, ಅದೃಷ್ಟ ಎನ್ನಿ. ಮುಂದಿನ ವರ್ಷದಿಂದ ಆ ಅರುವತ್ತರ ಮರ ಇವರಿಗೆ ಥ್ಯಾಂಕ್ಸ್ ಹೇಳಿದ್ದು ಭರ್ಜರಿ ಬೆಳೆಯ ಮೂಲಕ.

ಈ ಮರದ ಬೆಳೆ - ಗುಜ್ಜೆ, ಅಂದರೆ, ಎಳೆ ಹಲಸಾಗಿ ಬಳಸಲು ಸೂಕ್ತ; ಹಣ್ಣಾದರೆ ಯಾರಿಗೂ ಬೇಡ. ಸೊಳೆ ಬಲು ತೆಳ್ಳಗೆ, ಸಿಹಿಯೂ ಕಮ್ಮಿ. ಒಮ್ಮೆಲೇ ಭರ್ಜರಿ ಗುಜ್ಜೆ ಸಿಗತೊಡಗಿದಾಗ ಈ ಮರ ಮುತ್ತಜ್ಜನ ಹೆಸರು ರವಿಚಂದ್ರರಿಗೆ ನೆನಪಾಯಿತು. ಅವರಮ್ಮ ಇದನ್ನು ಕರೆಯುತ್ತಿದ್ದ ಹೆಸರೇನು ಗೊತ್ತೇ? `ಗುಜ್ಜೆ ಮರ'.

ಹಣ್ಣಿನಲ್ಲಿ ಸೋತರೇನು, `ಗುಜ್ಜೆ ಮರ' ತರಕಾರಿ ವಿಭಾಗದಲ್ಲಿ ಬಲು ಮುಂದೆ! ಉಳಿದೆಲ್ಲೂ ಗುಜ್ಜೆ ಸಿಗದೆ ಇರುವಾಗಲೇ ಇದರಲ್ಲಿ ಸುರು. ಸೆಪ್ಟೆಂಬರ್ ಹದಿನೈದರಿಂದ ಈ ಮರ ಗುಜ್ಜೆ ಕೊಡಲು ಸುರು ಮಾಡುತ್ತದೆ. ``ಅಕ್ಟೋಬರದಿಂದ ವರ್ಷದ ಕೊನೆ ವರೆಗೂ ಕೊಡುತ್ತಲೇ ಇರುತ್ತದೆ. ಕಿತ್ತ ಹಾಗೆಯೇ ಮತ್ತೆ ಮತ್ತೆ ಕಳ್ಳಿಗೆ ಬಿಡುತ್ತದೆ'' ಎನ್ನುತ್ತಾರೆ ಇವರು. ರವಿಚಂದ್ರರ ಊರು ಉರುವಾಲು. ಅಲ್ಲಿನ ಅಮ್ಟಾಂಗೆಯ ಕಲ್ಪತರು ಫಾಮ್ರ್ಸ್ ಇವರದು.

ಹಣ್ಣಿಗೆ ಇದು ಪ್ರಯೋಜನ ಇಲ್ಲವೆಂದು ಖಚಿತವಾದ ಕಾರಣ ರವಿಚಂದ್ರ ಮೊದಮೊದಲು ಗುಜ್ಜೆ ಕಿತ್ತು ಊರಿನ ಬಂಧುಮಿತ್ರರ ಕಾರ್ಯಕ್ರಮಗಳಿಗೆ ಕೊಡುತ್ತಿದ್ದರು. ಇದರಿಂದಾಗಿ ಅಕಾಲದ `ಅಮ್ಟಾಂಗೆ ಗುಜ್ಜೆ' ಈಗ ಬೇಡಿಕೆಯ ಐಟಂ. ಮೊನ್ನೆಮೊನೆ ಹೊಸ ವರ್ಷ ಕಾಲಿಕ್ಕಿದಾಗ ಊರಿನ ಒಬ್ಬರ ಮನೆಗೆ ಇನ್ನೂರು ಕಿಲೋ ಕಳಿಸಿದರು. ಸಮಾರಂಭವೊಂದಕ್ಕೆ. ಕಿಲೋಗೆ ಇಪ್ಪತ್ತು  ರೂ. ಒಂದೇ ಬಾರಿ 4,000 ರೂ. ಕಿಸೆಗೆ.

ಇನ್ನೂ ವಿಶೇಷವೆಂದರೆ, ರವಿಯದು `ಮನೆಯಿಂದಲೇ ಮಾರಾಟ'. ಹೀಗೆ ಆಗಲು ಕಾರಣವೂ ಇದೆ. ಹಿಂದೆ ಇವರು ದೊಡ್ಡ ಪ್ರಮಾಣದಲ್ಲಿ ತರಕಾರಿ ಬೆಳೆದು ಊರಿನವರಿಗೆ, ಅಂದರೆ ಸಮಾರಂಭಗಳಿರುವ ಮನೆಗೆ ಪೂರೈಸುತ್ತಿದ್ದರು. ಈಗ ಈ ಉಪವೃತ್ತಿ ಬಿಟ್ಟರೂ ಹಳೆ ಕೊಂಡಿಗಳು ಉಳಿದಿವೆ.

ಹದಿಮೂರು ವರ್ಷಗಳಿಂದ ರವಿಚಂದ್ರ `ಗುಜ್ಜೆ ಮರ'ದ ಗುಜ್ಜೆ ಮಾರುತ್ತಿದ್ದಾರೆ. ವರ್ಷಕ್ಕೆ ಕನಿಷ್ಠ 250  ಗುಜ್ಜೆ ಸಿಗುತ್ತದೆ. ನಾಲ್ಕರಿಂದ ಐದು ಕ್ವಿಂಟಾಲ್ ಗುಜ್ಜೆ ಮಾರುತ್ತಾರೆ. ``ಊರಿನಲ್ಲಿ ಗುಜ್ಜೆ ತೀರಾ ಕಮ್ಮಿಯಾದ ವರ್ಷ ಬಿಟ್ಟರೆ ಹೆಚ್ಚಿನ ವರ್ಷ 10,000 ರೂ. ಆದಾಯ ಪಡೆದಿದ್ದೇನೆ. ಕನಿಷ್ಠ ಎಂದರೆ 4,000 ರೂ.;  ಗರಿಷ್ಠ 15,000 ಸಿಕ್ಕಿದೆ,'' ರವಿ ನೆನೆಯುತ್ತಾರೆ.

ಜನವರಿ ಬಂದ ಮೇಲೆ ಊರಲ್ಲಿ ಅಲ್ಲಿಲ್ಲಿ ಎಳೆ ಹಲಸು ಸಿಗತೊಡಗುತ್ತದೆ. ಈ ಕಾರಣದಿಂದ ಸ್ಥಳೀಯ ಬೇಡಿಕೆ ಇಳಿಯತೊಡಗುತ್ತದೆ. ಮಿಗತೆ ಇರುವಾಗ ಅಥವಾ ಜನವರಿಯ ನಂತರ ಮಾತ್ರ ಗುಜ್ಜೆಯನ್ನು ಮಾರುಕಟ್ಟೆಗೆ ಕಳಿಸಬೇಕಾಗುತ್ತದೆ. ಊರಿನಿಂದ ಆಗಾಗ ಮಂಗಳೂರಿಗೆ ಹೋಗುವ ವಾಹನದಲ್ಲಿ ಕಳಿಸುತ್ತಾರೆ.

ಹಾಗೆ ನೋಡಿದರೆ ಅಮ್ಟಾಂಗೆ ಗುಜ್ಜೆಮರ ನೂರಕ್ಕೆ ನೂರು ಕೃಷಿಕ ಅಥವಾ ಮಾಲಿಕಸ್ನೇಹಿ. ಮುಕ್ಕಾಲು ಪಾಲು ಬೆಳೆಯೂ ನೆಲದಿಂದ ಹದಿನೈದು ಅಡಿಯ ವರೆಗಿನ ಎತ್ತರದೊಳಗೇ ಮೂಡಿ ಬರುತ್ತದೆ. ಇವರೇ ಕೊಯ್ದು ಕೊಡಬಹುದು. ಮೇಲೆ ಬೆಳೆಯುವ ಗುಜ್ಜೆಯನ್ನು ಮಾತ್ರ ಆಳಿನ ಮೂಲಕ ಕೊಯ್ಯಿಸಿ ಇಳಿಸಬೇಕು.

ಬೆಳೆ ಕೊಡುವ ಋತು ನೋಡಿ ಸೆಪ್ಟೆಂಬರಿನಿಂದ ದಶಂಬರ್ ಕೊನೆಗೆ ಎಂದರೆ ಊರಲ್ಲೆಲ್ಲೂ ಗುಜ್ಜೆ ಸಿಗದ ಕಾಲ. ಮದುವೆ, ಉಪನಯನ ಮಾಡುವವರಿಗೂ ಬಾಯಿಯಲ್ಲಿ ನೀರು ಬಾರದಿರುತ್ತದೆಯೇ?

``ಐದು ಕಿಲೋ ತೂಕ ಬರುವ ವರೆಗೂ ಇದು ಎಳೆ ಗುಜ್ಜೆಯಂತೆಯೇ ಇರುತ್ತದೆ. ಅನಂತರ ಮಾತ್ರ ಎಳೆಬೀಜದ ಸುತ್ತ ಪ್ಲಾಸ್ಟಿಕಿನಂತಹ ಸಿಪ್ಪೆ ಬೆಳೆಯತೊಡಗುತ್ತದೆ'' ಎನ್ನುತ್ತಾರೆ ಇವರು. ಆದರೆ ಬೆಳೆಯಬಿಟ್ಟರೆ ಕೆಲವೊಮ್ಮೆ ಬಲಿತು ಹಣ್ಣಾಗುವ ಮೊದಲೇ ಕೊಳೆತುಹೋಗುವುದೂ ಇದೆಯಂತೆ.

ಸೆಪ್ಟೆಂಬರಿನಲ್ಲಿ ಮೊದಲ ಕಂತಿನ ಬೆಳೆಯೇ 30 - 40 ಸಿಗುತ್ತದಂತೆ. ಆಗಲೇ ಇದು 3 - 4 ಕಿಲೋದ ವರೆಗೂ ಬೆಳೆದು ಸಿಗುತ್ತದೆ. ರವಿಚಂದ್ರ ಕಿಲೋಗೆ ಇಪ್ಪತ್ತು ರೂಪಾಯಿ ದರದಲ್ಲಿ ಇವನ್ನು ಮನೆಯಿಂದ ಮಾರುತ್ತಾರೆ. ``ಕೆಲವರು ಈ ದರ ಹೆಚ್ಚಾಯಿತು. ಹಲಸು ಮಾರುವುದುಂಟೇ ಅಂತೆಲ್ಲಾ ಹೇಳುತ್ತಾರಂತೆ. ಆ ಟೀಕೆಗಳಿಗೆ ನಾನು ಕಿವುಡಾಗುತ್ತೇನೆ'' ಎನ್ನುತ್ತಾರೆ.

ಅದೇನೇ ಇರಲಿ, ಪೂರ್ತಿ ಅಕಾಲದಲ್ಲಿ ಬೆಳೆ ಕೊಡುವ ಹಲಸು ಇರುವುದು ಇವರ ಭಾಗ್ಯ. ಅದೂ ಕೆಳಭಾಗದಲ್ಲೇ ಫಸಲು ಕೊಡುವುದು ಇನ್ನೂ ಅದೃಷ್ಟ. `ಗುಜ್ಜೆ ಇದೆಯಾ, ಬೇಕಿತ್ತು' ಎಂದು ಊರಿನ ಮಂದಿ ಕೇಳಿ ಕೊಳ್ಳುವುದನ್ನೂ ಸೇರಿಸಿದರೆ ಹ್ಯಾಟ್ರಿಕ್ ಆದಂತೆಯೇ.

ಈಗ ಗೊತ್ತಾಯಿತೇ, `ಅಂಗಳ ವಿಸ್ತರಿಸಿದ್ದರ ಜೇಸೀಬಿ ಖರ್ಚು ಹಿಂದೆ ಬಂತು' ಎಂಬ ರವಿಚಂದ್ರರ ಹೆಮ್ಮೆಯ ನುಡಿಯ ಹಿನ್ನೆಲೆ? ಒಂದು ಮರದಿಂದ, ಅಲ್ಲಲ್ಲ ಹಲಸಿನ ಮರದ ಬೆಳೆಯಿಂದ ಇಷ್ಟು ಕಾಲದಲ್ಲಿ ಲಕ್ಷ ರೂಪಾಯಿಗಿಂತಲೂ ಹೆಚ್ಚು ಆದಾಯ ಪಡೆದವರು ದಕ್ಷಿಣ ಕನ್ನಡ, ಏಕೆ ಮಲೆನಾಡಿನ ಕೃಷಿಕರಲ್ಲೇ ಬಹಳ ಇರಲಾರರು. ಏನಂತೀರಿ?

ರವಿಚಂದ್ರ - +91 98447 10594 (ಅನುಕೂಲ ಸಮಯ ಸಂಜೆ 6 - 8)