ADD

Back To Free Articles

Janaury-2019

ಮಲೆನಾಡಿಗೆ ಸೂಕ್ತ, ಮಡಹಾಗಲ

ವರ್ಷ ಮಲೆನಾಡಿಗೆ ಕಾಡುಪೀರೆಯ ವಾಣಿಜ್ಯ ಕೃಷಿ ಹಬ್ಬಿಸಲು ಚೆಟ್ಟಳ್ಳಿ ಚೆಸ್ ಉತ್ಸುಕವಾಗಿದೆ. ಊರ ತಳಿಗಿಂತ ಅಸ್ಸಾಮ್ ಮೂಲದ ತಳಿಯೇ ಇದಕ್ಕೆ ಸೂಕ್ತ ಎನ್ನುವುದು ಅವರ ಅನುಭವ. ಕಾಡು ತರಕಾರಿಯನ್ನು ಜನಪ್ರಿಯಗೊಳಿಸಲು `ಮಡಹಾಗಲ ದಿನ' ಆಚರಿಸಲೂ ಇವರು ನಿರ್ಧರಿಸಿದ್ದಾರೆ.

 

ಅಪ ಬಳಗ

 
no image
 

``ಕೊಡಗು ಮತ್ತು ಸುತ್ತಲಿನ ಮಲೆನಾಡಿನಲ್ಲಿ ಮಡಹಾಗಲ ಚೆನ್ನಾಗಿ ಬೆಳೆಯುತ್ತದೆ. ಇದಕ್ಕೆ ಒಳ್ಳೆಯ ಬೇಡಿಕೆ ಮತ್ತು ಬೆಲೆ ಇದೆ. ಕಾಡು ಪೀರೆ ಹೆಸರಿನ ಈ ತರಕಾರಿ ಇಲ್ಲಿ ಅಪರಿಚಿತ ಅಲ್ಲ. ಆದರೆ ವಾಣಿಜ್ಯ ಬೆಳೆಯಾಗಿ ಯಾರೂ ಕೈಗೆತ್ತಿಕೊಂಡಿಲ್ಲ. ಈ ವರ್ಷ ಮಡಹಾಗಲವನ್ನು ಮಲೆನಾಡಿನ ವಾಣಿಜ್ಯ ಬೆಳೆಯಾಗಿ ಹಬ್ಬಿಸಬೇಕೆನ್ನುವುದು ನನ್ನ ಕನಸು.''

ಈ ಮಾತು ಹೇಳುವ ವಿಜ್ಞಾನಿ ಡಾ. ಲಚುಮಿಕಾಂತನ್ ಭಾರತಿ ಚೆಟ್ಟಳ್ಳಿಗೆ ಕಳೆದ ವರ್ಷ ಬಂದವರು. ಅಲ್ಲಿನ ಐಐಹೆಚ್‍ಆರ್‍ನ (ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ) ಉಪಕೇಂದ್ರದ ಮುಖ್ಯಸ್ಥರು. ಒರಿಸ್ಸಾದಲ್ಲಿದ್ದಾಗ ಮಡಹಾಗಲದ ಬಗ್ಗೆ ಆಳ ಅಧ್ಯಯನ ನಡೆಸಿದವರು.

ಡಾ.ಭಾರತಿ ವಾಣಿಜ್ಯ ಕೃಷಿಗೆ ಶಿಫಾರಸು ಮಾಡುವುದು ನಮ್ಮ ಊರಿನ ತಳಿ, ಪಶ್ಚಿಮಘಟ್ಟದ ಕಾಡುಜಾತಿ ಪೀರೆ ಅಲ್ಲ. ಅಸ್ಸಾಮ್ ಮೂಲದ ಇನ್ನೊಂದು ತಳಿಯಿದೆ – Teasel gourd. ಸಸ್ಯಶಾಸ್ತ್ರೀಯ ಹೆಸರು Momordica subangulata. ಅಲ್ಲಿ ಇದಕ್ಕೆ ಸ್ಥಳೀಯ ಹೆಸರು ಕಾಕ್ರೋಲ್.

ಅಸ್ಸಾಮ್ ತಳಿ ಉತ್ತಮ

ಊರಿನ ಜಾತಿಯದರ ಇಂಗ್ಲಿಷ್ ಸಾಮಾನ್ಯ ಹೆಸರು Spine gourd; Momordica dioica. ``ಅಸ್ಸಾಮ್ ತಳಿಯ ಕಾಡುಪೀರೆಯ ಹಲವು ರೀತಿಗಳಲ್ಲಿ ಈ ಊರಿನಕ್ಕಿಂತ ಉತ್ತಮ'', ಡಾ. ಭಾರತಿ ವಿವರಿಸುತ್ತಾರೆ, ``ಅದು ಇಲ್ಲಿನದಕ್ಕಿಂತ ಗಾತ್ರದಲ್ಲಿ ದೊಡ್ಡದು. ಇಲ್ಲಿನದು ತಲಾ 30 - 40 ಗ್ರಾಂ ತೂಕ ಬಂದರೆ, ಅಸ್ಸಾಮ್ ತಳಿ ನೂರು ಗ್ರಾಮಿನ ಸುತ್ತಮುತ್ತ ತೂಗುವುದಿದೆ. ಊರಿನ ತಳಿಯ ಸೀಸನ್ ಮೂರೇ ತಿಂಗಳು. ಅಸ್ಸಾಮಿನದು ಹಾಗಲ್ಲ. ಅದು ಏಪ್ರಿಲಿನಿಂದ ಆಗಸ್ಟ್ ವರೆಗೆ ಆರು ತಿಂಗಳು ಬೆಳೆ ಕೊಡಬಲ್ಲುದು. ಅಸ್ಸಾಮ್ ತಳಿಯ ಸಸ್ಯೋತ್ಪಾದನೆ ಸುಲಭ. ನಮ್ಮ ಇಲ್ಲಿನ ಸ್ಥಳೀಯ ತಳಿಯ ಗಡ್ಡೆಯಿಂದ ಬೆರಳೆಣಿಕೆಯ ಗಿಡಗಳನ್ನಷ್ಟೇ ಮಾಡಲು ಸಾಧ್ಯ, ಆದರೆ ಅಸ್ಸಾಮ್ ತಳಿಯದ್ದರ ತಾಯಿ ಗಡ್ಡೆಯ ಸುತ್ತಲೂ ಬೆಳೆಯುವ ಮರಿಗಡ್ಡೆಗಳಿಂದ ಹಲವಾರು ಗಿಡ ಸುಲಭವಾಗಿ ಮಾಡಬಹುದು. ಮರಿಗಡ್ಡೆಗಳನ್ನು ಕತ್ತರಿಸಿಯೂ ಗಿಡ ಮಾಡಬಹುದು.''

ಬೀಜದಿಂದಲೂ ಗಿಡ ಮಾಡಬಹುದು. ಆದರೆ ಮಡಹಾಗಲದಲ್ಲಿ ಹೆಣ್ಣು ಮತ್ತು ಗಂಡು ಬಳ್ಳಿಗಳಿರುತ್ತವೆ. ಬೀಜದಿಂದ ಮಾಡಿದಾಗ ಹೆಚ್ಚೂ ಗಂಡು ಬಳ್ಳಿಗಳೇ ಬರುವುದಿದೆ. ಮಾತ್ರವಲ್ಲ ತಾಯಿಬಳ್ಳಿಯ ಗುಣ ಹಾಗೆಯೇ ಬರುತ್ತದೆ ಎನ್ನುವಂತಿಲ್ಲ. ವಾಣಿಜ್ಯ ಮಟ್ಟದಲ್ಲಿ ಬೆಳೆಯುವಾಗ ಹತ್ತು ಹೆಣ್ಣು ಬಳ್ಳಿಗಳಿಗೆ ಒಂದು ಗಂಡು ಬಳ್ಳಿ ಇರುವುದು ಸೂಕ್ತ.

ಅಸ್ಸಾಮ್ ತಳಿಗೆ ಒಂದು ದೋಷವಿದೆ. ಇದರ ಪರಾಗಸ್ಪರ್ಶ ನಾವೇ ಮಾಡಬೇಕು. ಇದಕ್ಕಾಗಿ ದಿನಾಲೂ ಒಂದಷ್ಟು ಸಮಯ ಕೊಡಬೇಕು ಎನ್ನುವುದನ್ನು ಬಿಟ್ಟರೆ ಪರಾಗಸ್ಪರ್ಶದ ಕೆಲಸ ಸುಲಭವೇ.

ಕನಸು ಹೊತ್ತೇ ಬಂದವರು

ಐಐಹೆಚ್‍ಆರ್ ಭುವನೇಶ್ವರ ಉಪಕೇಂದ್ರದಿಂದ ಡಾ. ಭಾರತಿ ಅವರಿಗೆ ವರ್ಷದ ಹಿಂದೆ ಬೆಂಗಳೂರಿಗೆ ವರ್ಗ ಆಗಿತ್ತು. ಅಲ್ಲಿಂದ ಚೆಟ್ಟಳ್ಳಿಗೆ ವರ್ಗಾವಣೆ.'' ಇಲ್ಲಿಗೆ ಬರುವಾಗಲೇ ನನ್ನ ನೆಚ್ಚಿನ ಮಡಹಾಗಲವನ್ನು ವಾಣಿಜ್ಯ ಕೃಷಿಯಾಗಿ ಜನಪ್ರಿಯಗೊಳಿಸಬೇಕು ಎಂಬ ಕನಸು ಹೊತ್ತೇ ಬಂದಿದ್ದೆ'', ಎಂದು ಅವರು ನೆನೆಯುತ್ತಾರೆ. ಚೆಟ್ಟಳ್ಳಿಗೆ ಕಾಲಿಡುವಾಗಲೇ ಒಂದಷ್ಟು ಅಸ್ಸಾಮ್ ಮಡಹಾಗಲದ ಗಿಡಗಳನ್ನು ಸಾಗಿಸಿಕೊಂಡೇ ಇವರು ಬಂದರು ಎಂದರೂ ಸರಿ!

ಕನಸು ಏನೇ ಇದ್ದರೂ, ಕೊಡಗಿನ ಮಣ್ಣು- ಹವಾಮಾನಕ್ಕೆ ಅಸ್ಸಾಮ್ ತಳಿ ಹೊಂದುತ್ತದೆಯೇ ಎಂದು ನೋಡಬೇಡವೇ? ಭಾರತಿ ತಡ ಮಾಡದೇನೇ ಕಾರ್ಯಪ್ರವೃತ್ತರಾದರು. ಕೇಂದ್ರದ ಗೋದಾಮುಗಳಲ್ಲಿ ಇಣುಕಿದರು. ಪಡಸಾಲೆಗಳ ಮೂಲೆಯ ರಾಶಿ ಕೆದಕಿದರು. ಕಾಲೆಕ್ರೆಗೆ `ಟ್ರೆಲ್ಲಿಸ್' ನಿರ್ಮಾಣ ಮಾಡಲು ಬೇಕಾದಷ್ಟು ಪರಿಕರಗಳು ಕೇಂದ್ರದೊಳಗೇನೇ ಸಿಕ್ಕವು. ತಗೊಳ್ಳಿ, ಫೆಬ್ರವರಿ ಬರುತ್ತಲೇ ಟ್ರೆಲ್ಲಿಸ್ ಎಬ್ಬಿಸಿ ಗಿಡ ನೆಟ್ಟರು.

ಕಾಡು ಪೀರೆ ಬಳ್ಳಿಗೆ ಚಪ್ಪರ ಹಾಕುವುದು ನಮಗೆ ಗೊತ್ತು. ಈ ಟ್ರೆಲ್ಲಿಸ್ ಅಂದರೇನು? ತಂತಿ ಬೇಲಿಯನ್ನು ಊಹಿಸಿಕೊಳ್ಳಿ. ಸ್ವಲ್ಪ ಹೆಚ್ಚು ಅಂತರ ಇಟ್ಟುಕೊಂಡು,  ಅದೇ ಬೇಲಿಯನ್ನು ಇನ್ನೂ ಎತ್ತರಕ್ಕೆ ನಿರ್ಮಿಸಿ, ತಂತಿಗಳ (ಮುಳ್ಳಿಲ್ಲದವು!) ಸಾಲನ್ನು ಸ್ವಲ್ಪ ಹೆಚ್ಚು ಅಂತರದಲ್ಲಿ ಜೋಡಿಸಿದರೆ ಹೇಗೆ? ಈ ಥರದ ಎತ್ತರದ ಬೇಲಿಯೇ ಟ್ರೆಲ್ಲಿಸ್.

ಕೃತಕ ಪರಾಗಸ್ಪರ್ಶ ಬೇಕಾದ ಕಾರಣ ಅಸ್ಸಾಮ್ ತಳಿ ಕಾಡುಪೀರೆಯ ವಾಣಿಜ್ಯ ಕೃಷಿಗೆ ಟ್ರೆಲ್ಲಿಸ್ ವಿಧಾನವೇ ಅನುಕೂಲಕರ. ಚಪ್ಪರ ಹಾಕಿದರೆ ಹೂವು ಅರಳಿದ ಎಲ್ಲೆಡೆಗೆ ಕೈ ಹಾಕುವುದು ಕಷ್ಟ.

ಕಾಲೆಕರೆಯಲ್ಲಿ ಅರ್ಧ ಲಕ್ಷ ರೂ.

ಚೆಟ್ಟಳ್ಳಿಯ ಕಾಲೆಕರೆ ಅಸ್ಸಾಮ್ ತಳಿ ಮಡಹಾಗಲ ಕೃಷಿ ಒಳ್ಳೆಯ ಬೆಳೆ ಕೊಟ್ಟಿದೆ ಎನ್ನುತ್ತಾರೆ ಡಾ. ಭಾರತಿ. ಒಂದು ಟನ್ ಫಸಲು ಬಂದಿತ್ತಂತೆ. ಇದನ್ನು ಕಿಲೋಗೆ 50 ರೂ. ಯಂತೆ ಇವರದೇ ಆವರಣದ ಮಳಿಗೆಯಲ್ಲಿ ಮಾರಿದ್ದಾರೆ.

ಒಟ್ಟು ಅರ್ಧ ಲಕ್ಷ ರೂ. ಆದಾಯ. ``ಕೊಡಗಿನಲ್ಲಿ ಮಡಹಾಗಲಕ್ಕೆ ಭಾರೀ ಬೇಡಿಕೆಯಿದೆ. ನಮ್ಮ ಮಳಿಗೆಗೆ ಅದು ತಲಪುತ್ತಲೇ ಖಾಲಿಯಾಗುತ್ತಿತ್ತು. ಖಾಸಗಿ ವ್ಯಾಪಾರಿಗಳು ನಮ್ಮನ್ನು ಸಂಪರ್ಕಿಸಿದ್ದರು. ಆದರೆ ನಾವು ಹಾಗೆ ರಖಂ ಆಗಿ ವ್ಯಾಪಾರಿಗಳಿಗೆ ಕೊಡುವಂತಿಲ್ಲ'', ನೆನೆಯುತ್ತಾರೆ ಭಾರತಿ.

ಕೊಡಗಿನಲ್ಲೇ ಹೊರಗಿನ ಮಾರುಕಟ್ಟೆಯಲ್ಲಿ ಮಡಹಾಗಲಕ್ಕೆ ಕನಿಷ್ಠ ನೂರು ರೂಪಾಯಿ ಬೆಲೆಯಿದೆಯಂತೆ. ನೂರ ಐವತ್ತು ಆಗುವುದೂ ಇದೆ. ದಕ್ಷಿಣ ಕನ್ನಡದಲ್ಲೂ ಇದಕ್ಕೆ ಭಾರೀ ಬೇಡಿಕೆ. ವಿಶೇಷವಾಗಿ ಗೌಡ ಸಾರಸ್ವತ ಬ್ರಾಹ್ಮಣರಿಗೆ ಇದು ಅಚ್ಚುಮೆಚ್ಚು.

ಈ ವರ್ಷ ತಮ್ಮಲ್ಲಿ ತಯಾರಾದ ಗಡ್ಡೆಗಳಿಂದ ಚೆಟ್ಟಳ್ಳಿಯ ಚೆಸ್ (ಈ  ಸಂಸ್ಥೆಯ  ಹೆಸರು ಚೆಸ್ ಅಂದರೆ ಚೆಟ್ಟಳ್ಳಿ ಹಾರ್ಟಿಕಲ್ಚರ್ ಎಕ್ಸ್‍ಪೆರಿಮೆಂಟ್ ಸ್ಟೇಶನ್) ಐದು ಸಾವಿರ ಗಿಡ ತಯಾರು ಮಾಡಲು ಸಿದ್ಧತೆ ನಡೆಸಿದೆ. ಜನವರಿ - ಅಂದರೆ ಈ ತಿಂಗಳಲ್ಲೇ ಇವು ಸಿದ್ಧವಾಗಲಿವೆ.

ಕೊಡಗು, ದ.ಕ, ಉಡುಪಿ, ಚಿಕ್ಕಮಗಳೂರು, ಉ.ಕ - ಹೀಗೆ ಮಲೆನಾಡಿನ ಬೇರೆ ಬೇರೆ ಕಡೆಯ ಆಸಕ್ತ ಕೃಷಿಕರು ಚೆಸ್ ಚೆಟ್ಟಳ್ಳಿಯನ್ನು ಗಿಡಗಳಿಗಾಗಿ ಸಂಪರ್ಕಿಸಬಹುದು. ಆಯ್ಕೆಯಾದ ಕೃಷಿಕರಿಗೆ ಸಂಸ್ಥೆ ತಲಾ ನೂರು ಗಿಡ ಮತ್ತು ತರಬೇತಿ ಕೊಟ್ಟು ಕಳಿಸುತ್ತದೆ. ``ಮುಂದಿನ ವರ್ಷಕ್ಕೆ ಈ ಕೃಷಿಕರೇ ದೊಡ್ಡ ಪ್ರಮಾಣದ ಕೃಷಿಗೆ ಬೇಕಾದಷ್ಟು ಗಿಡ ಮಾಡಿಕೊಳ್ಳಬಹುದು'' ಎನ್ನುತ್ತಾರೆ ಇವರು.

ಕೇಂದ್ರ ಕೊಡಮಾಡಿದ ಗಿಡಗಳನ್ನು ವೃದ್ಧಿ ಮಾಡಿ ಮುಂದಿನ ಸಾಲಿನಲ್ಲಿ ಕನಿಷ್ಠ ಕಾಲು ಎಕರೆ ಕೃಷಿ ಮಾಡುವವರಿಗೆ ಆದ್ಯತೆ.

ಒಂದೇ ಕಡೆ ಆರು ವರ್ಷ

ಒಮ್ಮೆ ನೆಟ್ಟರೆ ಮಣ್ಣಿನ ಅಡಿಯಲ್ಲಿ ಗಡ್ಡೆ ಬೆಳೆಸುವ ಅಸ್ಸಾಮಿ ತಳಿ ಮಡಹಾಗಲವನ್ನು ಅದೇ ಜಾಗದಲ್ಲಿ ಐದಾರು ವರ್ಷ ಕೃಷಿ ಮಾಡಬಹುದು. ಸ್ಥಳೀಯ ವಸ್ತುಗಳಿಂದ ಮಿತ ವೆಚ್ಚದ ಟ್ರೆಲ್ಲಿಸ್ ಮಾಡಬಹುದು. ಆಳೆತ್ತರದ ಗೂಟ ಹಾಕಿ ಅಡ್ಡಕ್ಕೆ ಮೂರು ಸಾಲು ತಂತಿ ಕಟ್ಟಬೇಕು. ನೆಲದಿಂದ 50 ಸೆಂಟಿಮೀಟರ್ ಎತ್ತರದಲ್ಲಿ ಒಂದು ಸಾಲು, ಮತ್ತೆ ತಲಾ ಮೂವತ್ತು ಸೆಂಟಿಮೀಟರ್ ಅಂತರದಲ್ಲಿ ಮತ್ತೆ ಎರಡು ಸಾಲು - ಹೀಗೆ ಮೂರು ಸಾಲು ತಂತಿ ಕಟ್ಟಬೇಕು.

ಎರಡು ಮೀಟರ್ ಚೌಕದಲ್ಲಿ ಗಿಡ ನಾಟಿ. ಕಾಲೆಕರೆಯಲ್ಲಿ ಸಾವಿರ ಗಿಡ ನಿಲ್ಲುತ್ತದಂತೆ. ``ಒಂದೆಕರೆಯಲ್ಲಿ ಈ ಮಡಹಾಗಲ ಕೃಷಿ ಮಾಡಿದರೆ ಹಾಯಾಗಿ ಒಂದು ಲಕ್ಷ ರೂ. ಸಂಪಾದಿಸಬಹುದು'' ಎನ್ನುತ್ತಾರೆ ಡಾ. ಭಾರತಿ. ಮಡಹಾಗಲಕ್ಕೆ ಕೇರಳ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಒಳ್ಳೆ ಬೇಡಿಕೆ ಇದ್ದು ಹೇಳಿಕೊಳ್ಳುವಂಥಹ ವಾಣಿಜ್ಯ ಕೃಷಿಯ ಬಗ್ಗೆ ಯಾರೂ ಗಂಭೀರವಾಗಿ  ಯೋಚಿಸಿಯೇ ಇಲ್ಲ ಎನ್ನುತ್ತಾರೆ ಇವರು.

ಈ ವರ್ಷ ಮಳೆಗಾಲದಲ್ಲಿ, ಚೆಟ್ಟಳ್ಳಿಯಲ್ಲಿ ಮಡಹಾಗಲದ ಒಳ್ಳೆ ಫಸಲು ಬರುತ್ತಿರುವಾಗ  `ಮಡಹಾಗಲ ದಿನ' ಆಚರಿಸಲು ಡಾ. ಭಾರತಿ ನಿರ್ಧರಿಸಿದ್ದಾರೆ. ಬಂದ ಕೃಷಿಕರಿಗೆ ಮಡಹಾಗಲ ಕೃಷಿಯ ತಿಳಿವಳಿಕೆ ಕೊಡುವುದು, ಮಾಹಿತಿ - ಅನುಭವಗಳ ವಿನಿಮಯ ಈ ಕಾರ್ಯಕ್ರಮದ ಮುಖ್ಯ ಉದ್ದೇಶ.

ದ.ಕ.ದ ಕೆಲ ಕೃಷಿ ಆಸಕ್ತರಿಗೆ ಅಸ್ಸಾಮ್ ಕಾಡುಪೀರೆ ಕೃಷಿಯ ಅನುಭವ ಇದೆ. ಮಲ್ಯ ಶಂಕರ ಭಟ್ ಈ ಭಾಗದಲ್ಲಿ ಇದನ್ನು ಬೆಳೆಯತೊಡಗಿದ ಮೊದಲಿಗರಲ್ಲಿ ಒಬ್ಬರು. `ಮೋರ್' ಸೂಪರ್ ಮಾರ್ಕೆಟ್ಟಿನಲ್ಲಿ ಕೊಂಡುಕೊಂಡ ಹೊಸ ಪೀರೆ ತಳಿ ಅವರನ್ನು ಆಕರ್ಷಿಸಿತು. ಅದರಲ್ಲೇ ಹಣ್ಣಾದುದರ ಬೀಜ ಬಿತ್ತಿದರು.

`ಒಳ್ಳೆ ಗೊಬ್ಬರ ಕೊಟ್ಟರೆ 10 - 12 ಕಾಯಿಗಳಲ್ಲಿ ಒಂದು ಕಿಲೋ ಆಗುತ್ತದೆ. ಊರಿನ ಜಾತಿ ಹದ ಸೈಜಿನದು ಕಿಲೋ ಆಗಲು 20 - 25 ಬೇಕು. ಇವೆರಡರ ನಡುವೆ ರುಚಿಯಲ್ಲಿ ನಸು ವ್ಯತ್ಯಾಸ ಮಾತ್ರ ಇದೆ. ಅಸ್ಸಾಮ್ ತಳಿಯದು ಸ್ವಲ್ಪವೇ ಸ್ವಲ್ಪ ಕಹಿ ಜಾಸ್ತಿ. ಮಾನವಯತ್ನದಿಂದಲೇ ಪರಾಗಸ್ಪರ್ಶ ಮಾಡಬೇಕಾಗಿರುವುದು ಸ್ವಲ್ಪ ಕಷ್ಟದ ಕೆಲಸ. ಚಪ್ಪರ ಹಾಕಿ ತೆಳ್ಳಗೆ ಹಬ್ಬಿಸಿದರೆ ಬೆಳೆ ಜಾಸ್ತಿ. ಪ್ರತಿವರ್ಷ ಬಳ್ಳಿ ಸತ್ತು ಮತ್ತೆ ಅಡಿಯ ಗಡ್ಡೆಗಳಿಂದ ಚಿಗುರಿ ಬರುತ್ತದೆ.

ಶಂಕರ ಭಟ್ ಈಗ ಇದರ ಕೃಷಿಗೆ ಅಷ್ಟು ಆಸಕ್ತಿ ತೋರುತ್ತಿಲ್ಲ. ಅಂಗಳದಲ್ಲಿಡೀ ಬಳ್ಳಿಗಳು ಈಗಲೂ ಚಿಗುರಿ ಹತ್ತಿರದ ಗಿಡಗಳಿಗೆ ಹಬ್ಬುತ್ತವೆ. ಕೆಲವೊಂದಕ್ಕೆ ಪರಾಗಸ್ಪರ್ಶ ಮಾಡುತ್ತಾರೆ. ಕಾಯಿಯದು ಮಾತ್ರ ವಲ್ಲದೆ ಎಲೆಯ ಪೋಡಿ (ಬಜ್ಜಿ) ಗರಿಗರಿಯಾಗಿ ರುಚಿಕರವಾಗಿ ಇರುತ್ತದೆ ಎನ್ನುತ್ತಾರೆ.

ಗಂಡು ಹೆಣ್ಣು ಸಮಸ್ಯೆ

ಮಂಗಳೂರಿನ ತಾರಸಿ ಕೃಷಿಕ ಜಿ.ಪಿ.ಶೆಣೈ ಮತ್ತು ಕಲ್ಲಡ್ಕ ದಿನೇಶ್ ಪ್ರಭು ಕೂಡಾ ಐದಾರು ವರ್ಷಗಳಿಂದ ಅಸ್ಸಾಮ್ ಕಾಡುಪೀರೆಯನ್ನು ಇಷ್ಟಪಟ್ಟು ಬೆಳೆಸುತ್ತಿದ್ದಾರೆ. ಇವರಿಗೆ ಗಂಡು-ಹೆಣ್ಣುಗಳ ಸಮಸ್ಯೆ ಇದೆ. ಉದಾಹರಣೆಗೆ ದಿನೇಶ್ ಪ್ರಭು ಅವರ ಆವರಣದಲ್ಲಿ ಗಂಡು ಬಳ್ಳಿ ಸತ್ತಿದ್ದು ಅವರು ಅದಕ್ಕಾಗಿ ಹುಡುಕುತ್ತಿದ್ದಾರೆ. ಈಚೆಗೆ ಊರಿನ ತಳಿಯ ಕಾಡುಪೀರೆಯ ಗಂಡು ಬಳ್ಳಿ ಸಂಪಾದಿಸಿ ಅದರ ಪರಾಗಸ್ಪರ್ಶ ಮಾಡುತ್ತಿದ್ದಾರೆ.

ಶಂಕರ  ಭಟ್  ಸೇರಿದಂತೆ  ಈ  ಮೂವರ ಅಭಿಪ್ರಾಯದಲ್ಲಿ ದ.ಕ. ಪರಿಸ್ಥಿತಿಯಲ್ಲಿ ಅಸ್ಸಾಮ್ ಮಡಹಾಗಲ ಚೆನ್ನಾಗಿ ನೋಡಿಕೊಂಡರೆ ಬಹುತೇಕ ವರ್ಷವಿಡೀ ಬೆಳೆ ಕೊಡುತ್ತದೆ. ``ಒಮ್ಮೆಯ ಬೆಳೆ ಆದ ನಂತರ ಪ್ರೂನ್ ಮಾಡಿ ಗೊಬ್ಬರ ಕೊಟ್ಟರೆ 40 ದಿನದಲ್ಲಿ ಕಾಯಿ ಮೂಡತೊಡಗುತ್ತದೆ. ``ಮೊದಲಿಗೆ, ತಿಂಗಳಲ್ಲೇ ಹೆಣ್ಣು ಹೂ ಕಾಣಿಸಿಕೊಳ್ಳುತ್ತದೆ. ಗಂಡು ಹೂ ಅರಳಲು ಇನ್ನೂ ಹತ್ತು ದಿನ ಲೇಟು'', ಶಂಕರ ಭಟ್ ವಿವರಿಸುತ್ತಾರೆ.

ಯಾವ ತಿಂಗಳಲ್ಲಿ ಹೀಗೆ ಬಳ್ಳಿ ಕತ್ತರಿಸಿ ಬಿಡುವುದು ಉತ್ತಮ, ವರ್ಷದಲ್ಲಿ ಎಷ್ಟು ಬಾರಿ ಬೆಳೆ ತೆಗೆದುಕೊಳ್ಳಲು ಸಾಧ್ಯ, ಗಂಡು - ಹೆಣ್ಣುಗಳ ಲಭ್ಯತೆ ಸಮಸ್ಯೆ ಆಗದಂತೆ ಹೇಗೆ ಮಾಡಬಹುದು? ಈ ವಿಚಾರಗಳಲ್ಲಿ ಆಳ ಅಧ್ಯಯನ ಆಗಬೇಕಿದೆ.

``ಅಸ್ಸಾಮ್ ತಳಿಗೆ ಇನ್ನೊಂದು ತಳಿಯ ಹೈಬ್ರಿಡೈಸ್ ಮಾಡುವುದರಿಂದ ಸಹಜ ಪರಾಗಸ್ಪರ್ಶ ಆಗುವಂತೆ ಮಾಡಬಹುದು. ಒರಿಸ್ಸಾದಲ್ಲಿ ಈ ಪ್ರಯೋಗದಲ್ಲಿ ಯಶ ಪಡೆದಿದ್ದೆವು. ಚೆಟ್ಟಳ್ಳಿಯಲ್ಲಿ ಈ ವರ್ಷ ಈ ಪ್ರಯೋಗ ನಡೆಸಲಿದ್ದೇವೆ. ಹೀಗೆ ಮಾಡುವುದರಿಂದ ಒಂದು ಅನನುಕೂಲತೆಯೂ ಇದೆ. ಕಾಯಿ ಅಸ್ಸಾಮ್ ತಳಿಯದರಷ್ಟು ದೊಡ್ಡದಾಗುವುದಿಲ್ಲ'', ಡಾ. ಭಾರತಿ ತಿಳಿಸುತ್ತಾರೆ.

ಡಾ. ಭಾರತಿ -  91 97766 75599 | lkyuvan@gamil.com

ಮಲ್ಯ ಶಂಕರ ಭಟ್ - 91 94489 53700 (6 - 8 PM)

----------------------------------------------------------------------------------------------------------------

ನೆಟ್ಟವನಿಗೆ `ಮರಣ ಭಯ' !

``ಡಹಾಗಲ ಗಿಡ ನೆಟ್ಟವನು ಸತ್ತುಹೋಗುತ್ತಾನೆ ಎನ್ನುವ ಮೂಢನಂಬಿಕೆ ಅಚ್ಚರಿ ಹುಟ್ಟಿಸುವಷ್ಟು ವ್ಯಾಪಕ ಮತ್ತು ಆಳವಾಗಿ ಬೇರೂರಿದೆ'' ಎನ್ನುತ್ತಾರೆ ಡಾ. ಭಾರತಿ. ದ.ಕ.ದಲ್ಲೂ ವಿಶೇಷವಾಗಿ ಕಾರ್ಮಿಕ ವರ್ಗದವರಲ್ಲಿ ಈ ನಂಬಿಕೆ ಈಗಲೂ ಅಷ್ಟಿಷ್ಟು ಇದೆ. ಗಿಡ ನೆಡಲೇಬೇಕಾದರೆ ಹಿಂದೆ ತಲೆ ಮೇಲೆ ಒಂದು ಹೆಡಿಗೆ (ಬುಟ್ಟಿ) ಕವುಚಿ ಹಾಕಿ ನೆಡುತ್ತಿದ್ದರಂತೆ. ಏಕೆಂದರೆ ಕಾಡುಪೀರೆಯ ಗಡ್ಡೆ ನೆಟ್ಟ ಮನುಷ್ಯನಷ್ಟು ದೊಡ್ಡದಾಗುವಾಗ ಆತ ತೀರಿಹೋಗುತ್ತಾನೆ ಎನ್ನುವ ಆತಂಕ. ಹೆಡಿಗೆಯಷ್ಟು ದೊಡ್ಡ ಗಡ್ಡೆ ಬೆಳೆಯದು ಎನ್ನುವ ವಿಶ್ವಾಸದಲ್ಲಿ `ಸಾವು ತಪ್ಪಿಸುವ' ಜಾಣತನ ಮಾಡುತ್ತಿದ್ದರಂತೆ. ``ಈ ಗಿಡ ನೆಟ್ಟವನು ಸತ್ತುಹೋಗುತ್ತಿದ್ದರೆ ನಾನು ಹಲವು ಬಾರಿ ಸಾಯಬೇಕಿತ್ತು'' ಎಂದು ಚಟಾಕಿ ಹಾರಿಸುತ್ತಾರೆ ಡಾ. ಲಚುಮೀಕಾಂತನ್ ಭಾರತಿ.

-------------------------------------------------------------------------------------------------------------

ಅತಿಮೋಹದ `ಪಾಗಿಳಾ'

ಕೊಂಕಣಿಗರೆಂದು ಕರೆಯುವ ಗೌಡ ಸಾರಸ್ವತ ಬ್ರಾಹ್ಮಣರಿಗೆ ಕಾಡುಪೀರೆ ಅಚ್ಚುಮೆಚ್ಚು, ಅಲ್ಲಲ್ಲ, ತಿನ್ನಲು ಸದಾಮೋಹ! ಒಂದು ರೀತಿಯಲ್ಲಿ ಈ ತಳಿಯ ಸಂರಕ್ಷಣೆಗೆ ಇವರೇ ಪರೋಕ್ಷ ಕಾರಣ. ಮಂಗಳೂರಿಗೆ ಯಾರಾದರೂ ಕಾಡು ಪೀರೆ ಮಾರಲು ತಂದರೆ ನೇರ ಒಯ್ಯುವುದು ಕಾರ್ ಸ್ಟ್ರೀಟಿಗೆ. ಈ ರಸ್ತೆಯಲ್ಲಿ ಕೊಂಕಣಿಗ ವ್ಯಾಪಾರಿಗಳ ದಟ್ಟಣೆಯಿದೆ. ಅಲ್ಲಿನ ಫ್ಲವರ್ ಮಾರ್ಕೆಟಿನಲ್ಲೂ ಇದಕ್ಕೆ ಒಳ್ಳೆಯ ಸ್ವಾಗತ. ಅದೆಷ್ಟೇ ಬಿಝಿ ಇರುವ ಕೊಂಕಣಿ ವರ್ತಕರಾದರೂ ಕಾಡುಪೀರೆ ಕೊಳ್ಳಲು ಸಿಕ್ಕಿದರೆ ಮನೆಗೆ ಕೊಟ್ಟೇ ಬರುತ್ತಾರೆ. ಮಧ್ಯಾಹ್ನ ಊಟದ ಜತೆ `ಪಾಗಿಳಾ ಫ್ರೈ' - ಕಾಡುಪೀರೆಯ ಪೋಡಿ ರೆಡಿ. ಹೋಟೆಲ್ ಅಯೋಧ್ಯೆಯಲ್ಲಿ ಇದು ಒಮ್ಮೊಮ್ಮೆ ಕಾಣಿಸಿಕೊಳ್ಳುತ್ತದೆ. ಕಾಯಿಸಿ ತಂದು ಅಲ್ಯುಮಿನಿಯಂ ತಟ್ಟೆಯ ಮೇಲೆ ಸುರಿಯುವ ಪುಟ್ಟ ಬೆಟ್ಟ ನೋಡನೋಡುತ್ತಿದ್ದಂತೆಯೇ ಪಾರ್ಸೆಲುಗಳಾಗಿ ಹೋಗಿ ಖಾಲಿ ಆಗುತ್ತ