ADD

Back To Free Articles

Janaury-2019

`ಕೊಯ್ಲುಗಾರರ ಸುರಕ್ಷೆ ಖಂಡಿತ ಸಾಧ್ಯ'

ಸೂಕ್ತ ಸುರಕ್ಷಾ ಜೋಡಣೆ ಧರಿಸಿ, ‘ಮಾಡಿ ಮತ್ತು ಬೇಡಿ'ಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಅಡಿಕೆ ಕೊಯ್ಲುಗಾರರು ಜೀವರಕ್ಷೆ ಮಾಡಿಕೊಳ್ಳಲು ಸಾಧ್ಯ ಎಂದು ತೋರಿಸಿಕೊಡುತ್ತಿದ್ದಾರೆ ವಿಜ್ಞಾನಿ.

ಅಡಿಕೆ ಮರ ಏರಿಳಿಯುವಾಗ ಆಗಬಹುದಾದ ಅಪಾಯ/ ಜೀವಹಾನಿ ತಪ್ಪಿಸುವ ಮಾರ್ಗಗಳಿವೆ; ಅವು ನಮ್ಮ ಎಟಕಿನಲ್ಲೇ ಇವೆಎನ್ನುತ್ತಾರೆ ಡಾ. ಕೆ.ಸಿ. ಶಶಿಧರ್.

 

ಲೇ:  ಶ್ರೀ ಪಡ್ರೆ

 
no image
 

ಡಿಕೆ ಮರ ಏರುವಾಗ ಅಚಾತುರ್ಯದಿಂದ ಬಿದ್ದು ಜಖಂ / ಜೀವಹಾನಿ ಆಗುವುದನ್ನು ಆಗಾಗ ಕೇಳುತ್ತೇವೆ. ಈ ದುರಂತಗಳನ್ನು ತಪ್ಪಿಸುವ ಮಾರ್ಗಗಳೇ ಇಲ್ಲವೇ?

``ಏಕಿಲ್ಲ? ಅವು ನಮ್ಮ ಎಟಕಿನಲ್ಲೇ ಇವೆ'' ಎಂದು ಆತ್ಮವಿಶ್ವಾಸದಿಂದ ಉತ್ತರಿಸಿದರು ಡಾ.ಕೆ.ಸಿ ಶಶಿಧರ್. ಅದು ದಶಂಬರ 4.  ವಿಟ್ಲ ಸಿಪಿಸಿಆರ್‍ಐಯ ಅಡಿಕೆ ತೋಟದಲ್ಲಿ ನಾವಿದ್ದೆವು. ಶಶಿಧರ್ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ಕಾಲೇಜಿನ ಕೃಷಿ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು. ಅವರು ಕ್ಯಾಂಪ್ಕೋ  `ಅಡಿಕೆ ಕೌಶಲ್ಯ ಪಡೆ' ತರಬೇತಿಗಾಗಿ ಸುರಕ್ಷಾ ವ್ಯವಸ್ಥೆ ಅಳವಡಿಸುವುದರಲ್ಲಿ ಮಗ್ನರಾಗಿದ್ದರು.

ಅಷ್ಟರಲ್ಲಿ ಅಲ್ಲಿಗೆ ಬಾಬು ಮೂಲ್ಯ ಬಂದರು. ಬಾಬು ದಶಕಗಳಿಂದ ಅಡಿಕೆ ಕೊಯ್ಲುಗಾರರು. ಅವರ ಮುಖಭಾವದಲ್ಲೇ `ಈ ಪ್ರೊಫೆಸರ್ ನಮ್ಮ ಕಾರ್ಯಕ್ಷೇತ್ರದಲ್ಲಿ ಏನು ಮಾಡ್ತಾರಪ್ಪಾ' ಎಂಬ ಕುತೂಹಲ  ಸ್ಪಷ್ಟವಾಗಿತ್ತು.  ಬಾಬು  ಅವರನ್ನು ಪರಿಚಯಿಸಿದ ಕೂಡಲೇ `ನೀವಿದನ್ನು ಬಳಸಿ ನೋಡ್ತೀರಾ?' ಎಂದು ಶಶಿಧರ್ ಕೆಲವು ಸಲಕರಣೆಗಳನ್ನು ಅವರೆದುರು ಒಡ್ಡಿಯೇ ಬಿಟ್ಟರು.

ಬಾಬು ಮೂಲ್ಯ ಇನಿತೂ ಯೋಚಿಸಲಿಲ್ಲ; ಅಳುಕಲೂ ಇಲ್ಲ. ``ತೂಕೊ (ನೋಡೋಣ)'' ಎಂದವರೇ ಸುರಕ್ಷಾ ಸಾಧನಗಳನ್ನು ಧರಿಸಿ ಸರಸರನೆ ಮರ ಏರಿದರು. ಅವರ ಮುಖ ಅರಳಿತ್ತು! ಕೈ ಬಿಟ್ಟರು, ತಳೆಯನ್ನೂ ಉದುರಿಸಿದರು. ಸ್ವಲ್ಪ ಹೊತ್ತು ತನ್ನ ಹೊಸ ಅನುಭವ ಸವಿಯುತ್ತಾ ಮರದ ಮೇಲೇ ಉಳಿದರು. ಇಳಿದವರೇ, ``ಈ ವ್ಯವಸ್ಥೆ ಇದ್ದರೆ ಏನೂ ಅಪಾಯ ಬಾರದು. ನನಗಂತೂ ತುಂಬ ಮೆಚ್ಚುಗೆಯಾಯಿತು'' ಎಂದು ನಿಷ್ಕಲ್ಮಶ ನಗು ಬೀರುತ್ತಾ  ಸರ್ಟಿಫಿಕೇಟ್ ಕೊಟ್ಟರು.

``ನೋಡಿ, ತರಬೇತಿ ಪಡೆಯುವ ಹೊಸಬರಿಗೆ ಬೇಕಾದ ಸುರಕ್ಷಾ ಕ್ರಮಗಳಿಗೂ ಅನುಭವಿಗಳಿಗೆ ಒದಗಿಸಬೇಕಾದ್ದಕ್ಕೂ ವ್ಯತ್ಯಾಸವಿದೆ. ಅನುಭವಿಗಳಿಗೆ ಸರಳ ಜೋಡಣೆಗಳು ಸಾಕು. ಅಂದಾಜು ನಾಲ್ಕು ಸಾವಿರ ರೂ. ವೆಚ್ಚ ಬೀಳಬಹುದು.'' ಶಶಿ ವಿವರಿಸಿದರು.

``ಅನುಭವಿಗಳು ಎರಡು ಮಾದರಿಗಳ ನಡುವೆ ಆಯ್ದುಕೊಳ್ಳಬಹುದು. ಎರಡೂ ಒಳ್ಳೆಯವೇ'', ಶಶಿ ಸೊಗಸಾಗಿ ವಿವರಿಸುತ್ತಾ ಹೋದರು. ``ಮರ ಏರುವಾಗ ಕೊಟ್ಟೆಮಣೆ ಬೇಕೇ ಬೇಕು ಎನ್ನುವವರಿಗೆ ಮೊದಲನೆ ವಿಧಾನ, ಉಳಿದವರಿಗೆ ಎರಡನೆಯದು.''

``ಎರಡೂ ವಿಧಾನಗಳಲ್ಲಿ ಮರ ಏರುವವರು `ಹಾರ್ನೆಸ್' ಎಂದು ಕರೆಯುವ ಬಾಡಿ ಬೆಲ್ಟ್ ಧರಿಸಿಕೊಳ್ಳಬೇಕು. ಸೊಂಟಕ್ಕೆ ಮಾತ್ರವಲ್ಲದೆ ತೊಡೆಗಳಿಗೂ ಸುತ್ತು ಹಾಕುವ ಬೆಲ್ಟ್ ಇದ್ದರೆ ಉತ್ತಮ. ತೊಡೆಗೆ ಸುತ್ತು ಹಾಕುವ ಬೆಲ್ಟಿನ ಭಾಗವನ್ನು `ಕಪ್' ಎನ್ನುತ್ತೇವೆ. ಈ ಕಪ್ ಅಗಲವಾಗಿದ್ದರೆ ಒಳ್ಳೆಯದು. ಎರಡಿಂಚಾದರೂ ಇರಲಿ. ಹಲವು ರೀತಿಯ ಬಾಡಿ ಬೆಲ್ಟುಗಳಿವೆ. ಒಳ್ಳೆಯ ಕಂಪೆನಿಯದಕ್ಕೆ ರೂ. 3,000 ಬೆಲೆಯಿದೆ.''

“ಮೊದಲನೆಯ ವಿಧಾನಕ್ಕೆ ಕೊಟ್ಟೆಮಣೆ, ಎಕ್ಸ್‍ಟೆನ್ಶನ್ ಕೋರ್ಡ್ ಮತ್ತು ಬಾಡಿ ಬೆಲ್ಟ್ ಬೇಕು.  ಅಡಿಕೆ ಮರಕ್ಕೆ ಕೊಟ್ಟೆಮಣೆಯ ಹಗ್ಗ ಸುತ್ತು ಹಾಕಿ ಮಣೆಯನ್ನು ಆ ಸುತ್ತಿನೊಳಗೆ (ಇದನ್ನು ಲೂಪ್ ಎನ್ನೋಣ) ತೂರಿಸುತ್ತೇವಲ್ಲಾ?  ಎಕ್ಸ್‍ಟೆನ್ಶನ್ ಕೋರ್ಡಿನ ಎರಡೂ ತುದಿಗಳಲ್ಲಿ ಕುಣಿಕೆ ಇರುತ್ತದೆ.  ಇದನ್ನೂ ಕೊಟ್ಟೆಮಣೆಯ ಹಗ್ಗದಂತೆಯೇ ಸುತ್ತು ಹಾಕಬೇಕು.  ಅನಂತರ ಅದರ ಕೆಳತುದಿಯನ್ನು ಕೊಟ್ಟೆಮಣೆ ಹಗ್ಗದ ಲೂಪಿನ ಒಳಗೆ ತೂರಿಸಿ ಕೆಳಗಿಳಿಸಬೇಕು. ಕೆಳಗಿಳಿದ ಎಕ್ಸ್‍ಟೆನ್ಶನ್ ಕೋರ್ಡಿನ ತುದಿಯ ಕುಣಿಕೆಯನ್ನು ಕೊಯ್ಲುಗಾರನ ಬಾಡಿ ಬೆಲ್ಟಿನ ಹುಕ್ಕಿಗೆ ಸಿಕ್ಕಿಸಿದರೆ ಮುಗಿಯಿತು.”

``ಎರಡನೆ ವಿಧಾನಕ್ಕೆ ಎಕ್ಸ್‍ಟೆನ್ಶನ್ ಕೋರ್ಡ್ ಬೇಡ. ಕೊಟ್ಟೆಮಣೆಯ ಮರದ ಮಣೆಯೂ ಅಗತ್ಯವಿಲ್ಲ. ಕೊಟ್ಟೆಮಣೆಗೆ ತೂರಿಸಿದ ಹಗ್ಗ ಇರುತ್ತಲ್ಲಾ, ಆ ಥರದ ಎರಡೂ ತುದಿಗೆ ತುಂಬ ಗಟ್ಟಿಯಾದ  ಸಿದ್ಧ  ಕುಣಿಕೆ ಇರುವ ಕಂಪೆನಿಯ ಹಗ್ಗ ಸಿಗುತ್ತದೆ. ಇದನ್ನು ಕೊಟ್ಟೆಮಣೆ ತೂರಿಸುವ ರೀತಿಯಲ್ಲೇ ಅಡಿಕೆ ಮರದ ಕಾಂಡಕ್ಕೆ ತೂರಿಸಬೇಕು. ಇದರ ಕೆಳಭಾಗದಲ್ಲಿರುವ ಎರಡೂ ಕುಣಿಕೆಗಳನ್ನು ಎರಡು ಹುಕ್ ಮೂಲಕ ಬಾಡಿ ಬೆಲ್ಟಿಗೆ ಸಿಕ್ಕಿಸಬೇಕು. ಅಷ್ಟೇ ಸಾಕು.''

``ಕೊಟ್ಟೆಮಣೆಗೆ ತೂರಿಸುವ ಹಗ್ಗ ತಾಂತ್ರಿಕ ಲೆಕ್ಕಾಚಾರದಲ್ಲಿ ಹದಿನಾಲ್ಕು ಅಥವಾ ಹದಿನಾರು ಮಿಲ್ಲಿಮೀಟರಿನದು ಸಾಕು. ಆದರೆ ಕೆಲವು ಕೊಯ್ಲುಗಾರರು ಇನ್ನೂ ದಪ್ಪದ ಹಗ್ಗಕ್ಕೆ ಒಗ್ಗಿಕೊಂಡಿರುತ್ತಾರೆ. ಅವರವರ ಅನುಕೂಲಕ್ಕೆ ತಕ್ಕ ಹದಿನಾಲ್ಕರಿಂದ ಇಪ್ಪತ್ತನಾಲ್ಕು ಮಿಲ್ಲಿಮೀಟರ್ ವರೆಗಿನದನ್ನು ಬಳಸಬಹುದು. ಈ ಹಗ್ಗದ ಸ್ಟಾಂಡಾರ್ಡ್ ಉದ್ದ ನಾಲ್ಕು ಮೀಟರ್. ಮೊದಲನೆಯ ವಿಧಾನದ ಎಕ್ಸ್‍ಟೆನ್ಶನ್ ಕೋರ್ಡ್ ಹದಿನಾಲ್ಕು ಅಥವಾ ಹದಿನಾರು ಮಿ.ಮೀ.ನದು ಸಾಕು.  ಹೆಚ್ಚು ದಪ್ಪಗಿನದು ಬೇಡ. ಈ ಹಗ್ಗದ ಉದ್ದ, ವ್ಯಕ್ತಿಯ ಎತ್ತರ ಹೊಂದಿ ಹೆಚ್ಚು ಕಡಿಮೆ ಮಾಡಬೇಕಾಗಬಹುದು. ಅದಕ್ಕೆ ಉದ್ದವನ್ನು ಹೊಂದಿಕೊಂಡು ಲಾಂಗ್, ಶಾರ್ಟ್ ಮತ್ತು ಮೀಡಿಯಂ ಅಂತ ಮೂರು ರೀತಿಯದನ್ನು ಇಟ್ಟುಕೊಂಡು ಅವರವರಿಗೆ ಹೊಂದುವ ಎಕ್ಸ್‍ಟೆನ್ಶನ್ ಕೋರ್ಡನ್ನು ಕೊಡಬಹುದು.''

``ಇವಿಷ್ಟು ಅಲ್ಲದೆ ತಲೆಯ ಮೇಲೆ ಇಂಡಸ್ಟ್ರಿಯಲ್ ಹೆಲ್ಮೆಟ್ ಇಟ್ಟುಕೊಳ್ಳುವುದೂ ಅತ್ಯಗತ್ಯ. ಇದು ದ್ವಿಚಕ್ರಿಗಳ ಹೆಲ್ಮೆಟಿನಷ್ಟು ಭಾರ ಇಲ್ಲ. ಒಳ್ಳೆಯ ಗುಣಮಟ್ಟದ ಹೆಲ್ಮೆಟ್ ಅಂದಾಜು 300 ರೂ.ಗಳಿಗೆ ಸಿಗುತ್ತದೆ.''

ಈ ಜೋಡಣೆಗಳು ಎಲ್ಲಿ ಸಿಗುತ್ತವೆ? ಇವುಗಳ ತಯಾರಕ ಕಂಪೆನಿಗಳಲ್ಲಿ ಪ್ರಸಿದ್ಧವಾದವು ಯಾವುವು?

``ಆಟೋಟಕ್ಕೆ, ರಾಕ್ ಕ್ಲೈಂಬಿಂಗಿಗೆ ಬೇಕಾದ ಉತ್ಪನ್ನ ಮಾರುವ ಅಂಗಡಿಗಳಲ್ಲಿ ಇವು ಸಿಗುತ್ತವೆ. ಬೆಂಗಳೂರಿನಲ್ಲಿ ಇಂಥ ಹಲವು ಅಂಗಡಿಗಳಿವೆ. ಮಂಗಳೂರು ಭಾರತ್ ಮಾಲಿನಲ್ಲಿ ಡೆಕಾಥ್ಲಾನ್ ಮಳಿಗೆಯಿದೆ. ಸೈಮಂಡ್, ಕರಾಮ್, ಉದ್ಯೋಗಿ, ಪೆಟ್ಝಿ, ಕ್ಯಾಂಪ್, ಬ್ಲಾಕ್ ಡಯಮಂಡ್ ಇತ್ಯಾದಿ ಕೆಲವು ಪ್ರಸಿದ್ಧ ಬ್ರಾಂಡುಗಳು. ಸೈಮಂಡ್ ಉತ್ಪನ್ನ ಡೆಕಾಥ್ಲಾನ್ ನಲ್ಲಿ ಲಭ್ಯ. ಕರಾಮ್ ಮತ್ತು ಉದ್ಯೋಗಿ ಬೆಂಗಳೂರಿನ ಭುರಾನಿ ಇಂಡಸ್ಟ್ರಿಯಲ್ಲಿ ಸಿಗುತ್ತದೆ. ಇವನ್ನೆಲ್ಲಾ ಆನ್‍ಲೈನ್ ತರಿಸಿಕೊಳ್ಳಲೂ ಬರುತ್ತದೆ ಎನ್ನುತ್ತಾರೆ ಡಾ. ಶಶಿಧರ್. ಬೇಕಾದ ಅಳತೆಯ ಎಕ್ಸ್‍ಟೆನ್ಶನ್ ಕೋರ್ಡನ್ನು ಕೂಡಾ ಆದೇಶದ ಮೇಲೆ ಮಾಡಿಕೊಡುತ್ತಾರೆ.''

ಇವುಗಳ ಬಾಳಿಕೆ ಹೇಗೆ? ``ಬಾಡಿ ಬೆಲ್ಟನ್ನು ಹರಿತದ ಉಪಕರಣ, ಕತ್ತಿ ಇವುಗಳ ಜತೆ ಇಡಬಾರದು. ಎಚ್ಚರದಿಂದ ಇಟ್ಟುಕೊಂಡು ಬಳಸಿದರೆ ಮೂರು - ನಾಲ್ಕು ವರ್ಷ ಬರಬಹುದು. ಆದರೆ ಹಗ್ಗಗಳನ್ನು ಪ್ರತಿ ವರ್ಷ ಬದಲಿಸುವುದು ಉತ್ತಮ. ಬಾಡಿ ಬೆಲ್ಟಿನ ಹೊಲಿಗೆ ಬಿಟ್ಟಿದೆಯೋ, ಹಗ್ಗ, ಎಕ್ಸ್‍ಟೆನ್ಶನ್ ಕೋರ್ಡಿನ ಅತಿ ಹೊರಗಿನ ಎಳೆಗಳು ತುಂಡಾಗಿವೆಯೋ ಎಂದು ಎಚ್ಚರದಿಂದ ಗಮನಿಸುತ್ತಿರಬೇಕು. ಹಗ್ಗಗಳ ಹೊರಮೈಯ ಎಳೆಗಳು ತುಂಡಾದರೆ ಕೂಡಲೇ ಬದಲಿಸಬೇಕು.''

ವಿಟ್ಲದ  ತರಬೇತಿಯಲ್ಲಿ  ಚರಿತ್ರೆಯಲ್ಲಿ ಇದೇ ಪ್ರಪ್ರಥಮವಾಗಿ ಅಡಿಕೆ ಕೊಯ್ಲುಗಾರರಿಗೆ ವೃತ್ತಿಪರ ರೀತಿಯ ಸುರಕ್ಷತಾ ಜೋಡಣೆಯ ಪ್ರಯೋಗ ಮಾಡಲಾಗಿದೆ. ಹೀಗೆ ಮಾಡುವ ಮುನ್ನ ಡಾ. ಶಶಿಧರ್ ಈ ಬಗ್ಗೆ ಎರಡು ತಿಂಗಳಿಂದ ಅಧ್ಯಯನ ಬೇರೆಬೇರೆ ಜೋಡಣೆಗಳ ಮೌಲ್ಯಮಾಪನ ಮಾಡಿದ್ದರು. ಶಿಬಿರದ ಅವಧಿಯಲ್ಲಿ ವಿಟ್ಲದಲ್ಲಿ ಕೊಯ್ಲುಗಾರರಿಂದ ತುಂಬ ಹಿಮ್ಮಾಹಿತಿ ಪಡೆದಿದ್ದಾರೆ. ``ಕೊಯ್ಲುಗಾರರ ಅನುಕೂಲತೆಗೆ ಹೊಂದಿಕೊಂಡು ಇನ್ನಷ್ಟು ಫೈನ್ ಟ್ಯೂನಿಂಗ್ ಮತ್ತು ಕಸ್ಟಮೈಸಿಂಗ್ (ಅವರವರಿಗೆ ಹೊಂದಿಕೆ ಆಗುವಂತೆ ಬದಲಾವಣೆ) ಬೇಕಾಗಬಹುದು'' ಎನ್ನುತ್ತಾರೆ.

ಆದರೆ ನೆನಪಿರಲಿ,' ಈಗ ಮರ ಹತ್ತಬಹುದು, ಈ ಮರ ಹತ್ತಬಹುದು' ಎನ್ನುವ ಕೊಯ್ಲುಗಾರರ ಆತ್ಮದ ಅಭಿಪ್ರಾಯ ಮೀರಿ ಮರ ಏರಲೇಬಾರದು. ಸುರಕ್ಷಾ ಜೋಡಣೆ ಇದೆ ಎಂದು ಅತಿವಿಶ್ವಾಸ, ಅಂದರೆ ರಿಸ್ಕ್ ತೆಗೆಯುವ ಪ್ರವೃತ್ತಿ ಬೇಡ'' ಎಂದು ಅವರು ಎಚ್ಚರಿಸುತ್ತಾರೆ.

ಡಾ.ಕೆ.ಸಿ. ಶಶಿಧರ್ - + 91 94481 03268 

Shashidhar.kumbar@gmail.com

----------------------------------------------------------------------------------------------------------------

`ಜೀವರಕ್ಷೆ' ಬಗ್ಗೆ ಅರಿವಿನ ಸಭೆ

ಸುರಕ್ಷಾ ಜೋಡಣೆ ಮತ್ತು ಜೀವರಕ್ಷೆಯಲ್ಲಿ ಇವುಗಳ ಮಹತ್ವದ ಬಗ್ಗೆ ಪ್ರಚಾರ ಕೊಟ್ಟು ಆಸಕ್ತ ಕೊಯ್ಲುಗಾರರ ಏಕದಿನದ ಮಾಹಿತಿ ಸಭೆ ಏರ್ಪಡಿಸಬಹುದು. ಅಡಿಕೆ ಪ್ರದೇಶದ ಅಡಿಕೆ ಮಾರ್ಕೆಟಿಂಗ್ ಸಂಸ್ಥೆ, ಸಹಕಾರಿ ಸಂಘಗಳು, ಕೃಷಿಕ ಸಂಘಟನೆಗಳು, ಕೇವೀಕೆಗಳು ಇಂಥ ಸಭೆ ಹಮ್ಮಿಕೊಳ್ಳಬಹುದು. ಡಾ. ಶಶಿಧರ್ ಅವರಿಂದ ಸವಿವರ ಕರಪತ್ರಕ್ಕೆ ಮಾಹಿತಿ ಬರೆಯಿಸಿ, ಚಿತ್ರ ಸೇರಿಸಿ ಮುದ್ರಿಸಿ ವಿತರಿಸಬಹುದು. ಅವರಿಂದಲೇ ಈ ಜೋಡಣೆಗಳ ಪ್ರಾತ್ಯಕ್ಷಿಕೆ, ಸುರಕ್ಷಾ ಕ್ರಮಗಳ ಮಾಡಿ ಮತ್ತು ಬೇಡಿಗಳ ಬಗ್ಗೆ ತೋಟದಲ್ಲಿ ಪ್ರಾತ್ಯಕ್ಷಿಕೆಯೂ ಸೇರಿದಂತಹ ಕಾರ್ಯಕ್ರಮ ರೂಪಿಸುವುದು ಉತ್ತಮ.

ಈ ಸುರಕ್ಷಾ ಜೋಡಣೆಗಳಲ್ಲಿ ಹಲವು ರೀತಿಯ, ಹಲವು ಗುಣಮಟ್ಟದವು ಇವೆ. ಹಾಗಾಗಿ ಗುರುಮುಖೇನ ಪಾಠ ಹೇಳಿಸಿ ಸ್ಪಷ್ಟತೆ ರೂಪಿಸಿಕೊಳ್ಳುವುದು ಒಂದಷ್ಟು ಕಾಲದ ವರೆಗೆ ಅಗತ್ಯ. ಇವು ಸಾಮೂಹಿಕ ಬಳಕೆಗೆ ಬರುವ ವರೆಗೆ. ಇವನ್ನು ಜನಪ್ರಿಯಗೊಳಿಸುವ ಸಲುವಾಗಿ, ಈ ಸಂಘಟಕ ಸಂಸ್ಥೆಗಳು ಸ್ವಲ್ಪ ರಿಯಾಯಿತಿ ದರದಲ್ಲಿ ಈ ಜೋಡಣೆಗಳನ್ನು ತರಿಸಿ ಒದಗಿಸಬಹುದು. ಜೀವಕ್ಕಿಂತ ಇದಕ್ಕೆ ತಗಲುವ ವೆಚ್ಚ ದೊಡ್ಡದು ಅಲ್ಲವಲ್ಲಾ!