ADD

Back To Free Articles

December-2018

ದೂರ ನಿಯಂತ್ರಣದ ಅಡಿಕೆ ಕೊಯ್ಲು ಯಂತ್ರ

ನೆಲದಿಂದಲೇ ನಿಯಂತ್ರಿಸಬಲ್ಲ ಯಂತ್ರ ಅಡಿಕೆ ಕೊಯ್ಲಿನ ಕೆಲಸ ತೃಪ್ತಿಕರವಾಗಿ ಮಾಡುತ್ತಿದೆ. ಇದರ ಭಾರ ಇಳಿಸಿ ವಾಣಿಜ್ಯ ಮಟ್ಟದಲ್ಲಿ ಹೊರತಂದರೆ ಅಡಿಕೆ ಕೃಷಿಕರಿಗೆ ಉಪಯುಕ್ತವಾಗಬಲ್ಲುದು. ಹಾಗಾಗಬೇಕಾದರೆ ಗಣನೀಯ ವೆಚ್ಚ ಮತ್ತು ಸುಸಜ್ಜಿತ ಕಂಪೆನಿ ಮುಂದೆ ಬರಬೇಕು.

 
no image
 

ಲೇ:  ಡಾ. ಸುನಿಲ್ ವಿ.ಜಿ.

ಡಿಕೆ ಮರಕ್ಕೆ ಒಂದು ಯಂತ್ರ ಜೋಡಿಸಿದ್ದಾರೆ. ನೀವು ಮೊಬೈಲ್ ಚಾಲೂ ಮಾಡಿ `ಫಾರ್ವರ್ಡ್' ಎನ್ನುತ್ತೀರಾ. ತಕ್ಷಣ `ಗರ್ರ್' ಎನ್ನುತ್ತಾ ಯಂತ್ರ ಮೇಲೇರುತ್ತದೆ. ಮಾಗಿರುವ ಅಡಿಕೆ ಗೊನೆ ಕೊಯ್ಯಲು ನಿಮಗೆ ಬೇಕಾದ ಜಾಗ ತಲಪಿದಾಗ `ನ್ಯೂಟ್ರಲ್' ಎಂದು ಉದ್ಗರಿಸಿ. ಯಂತ್ರ ಅಲ್ಲೇ ನಿಲ್ಲುತ್ತದೆ. `ಕಟ್' ಎಂದು ಬಿಡು. ಯಂತ್ರದ ವೃತ್ತಾಕಾರದ ಬ್ಲೇಡು ತಿರುಗುತ್ತಾ ಮೇಲೇರಿ ಗೊನೆಯನ್ನು ಕಚಕ್ಕನೆ ಕತ್ತರಿಸಿ ಬಿಡುತ್ತದೆ. ಇನ್ನೀಗ `ರಿವರ್ಸ್' ಎಂದು ಆಜ್ಞೆ ಕೊಡಿ, ಸಾಕು. ಯಂತ್ರ ಕೆಳಕ್ಕಿಳಿಯುತ್ತದೆ.

ಇದು ಕೇರಳದ ಅಚ್ಚರಿ ಹುಟ್ಟಿಸುವ ಸಂಶೋಧಕ ಪಿ.ವಿ. ಸುರೇಶ್ ಅವರ ಈಚೆಗಿನ ತಯಾರಿ. 43 ವಯಸ್ಸಿನ ಈ ಉತ್ಸಾಹಿಗೆ ಮೆಕ್ಯಾನಿಕಲ್ ಎಂಜಿನಿಯರಿಂಗಿನ ಹಿನ್ನೆಲೆ ಇಲ್ಲ. ಓದಿದ್ದು ಒಂಭತ್ತನೆಯ ಕ್ಲಾಸು!           

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿದೆ ಸುರೇಶ್ ಪಿ.ವಿ. ಅವರ ಊರು ನಿಲಂಬೂರು. ಅಲ್ಲಿ ಇವರ ವಾಸಸ್ಥಳ ಟಿ.ಕೆ. ಕಾಲೊನಿಯ ಸುತ್ತಮುತ್ತ ಸಾಕಷ್ಟು ಅಡಿಕೆ ತೋಟಗಳಿವೆ. ಅಡಿಕೆ ಕೃಷಿಕರ ಕೊಯ್ಲಿನ ಸಂಕಷ್ಟ ಕಂಡು ಸುರೇಶ್ ಈ ಯಂತ್ರವನ್ನು ಅಭಿವೃದ್ಧಿಗೊಳಿಸಿದ್ದಾರೆ. ಇದು 42 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದೆ. ಗಂಟೆಗೆ ಅರ್ಧ ಲೀಟರ್ ಪೆಟ್ರೋಲ್ ಸಾಕು. ಪೆಟ್ರೋಲ್ ಚಾಲಿತವಾದ ಕಾರಣ ಬ್ಯಾಟರಿ ನಿರ್ವಹಣೆ ಮಾಡುವ, ಚಾರ್ಜ್ ಮಾಡುವ  ಹಳ್ಳಿ  ಮೂಲೆಗಳಲ್ಲಿ  ಎದುರಾಗುವ ಸಮಸ್ಯೆಗಳಿಲ್ಲ.

ಉದ್ದದ ಅಡಿಕೆ ಮರವನ್ನು ಏರಿ ಕೊಯ್ಲು ಮುಗಿಸಿ ಇಳಿಯಲು ಸುಮಾರು ಮೂರು ನಿಮಿಷ ಸಾಕು. ಒಂದು ಮರದಿಂದ ಕಳಚಿ ಇನ್ನೊಂದಕ್ಕೆ ಜೋಡಿಸಲು ಹೆಚ್ಚು ಸಮಯ ತಗಲುವುದಿಲ್ಲ. ಈ ಯಂತ್ರವನ್ನು ನೆಲದಲ್ಲೇ ನಿಂತು ರಿಮೋಟ್ ಕಂಟ್ರೋಲ್ ಅಥವಾ ಮೊಬೈಲ್ ಮೂಲಕ ನಿಯಂತ್ರಿಸಬಹುದು. ಮೊಬೈಲ್ ಕಂಟ್ರೋಲ್ ಧ್ವನಿ ಆದೇಶವನ್ನೂ ಪಾಲಿಸಬಲ್ಲುದು. ರಿಮೋಟ್ ಕಂಟ್ರೋಲು ಸುಮಾರು ನೂರು ಮೀಟರಿನಷ್ಟು ದೂರದ ವರೆಗೆ ನಡೆಯುತ್ತದೆ. ಯಂತ್ರ ಮೇಲ್ಬದಿ ಪಯಣ, ಕೆಳಗಿಳಿಯುವ, ನಿಂತಲ್ಲೇ ನಿಲ್ಲುವ ಮತ್ತು ಕೊಯ್ಯುವ - ಹೀಗೆ ಒಟ್ಟು ನಾಲ್ಕು ಆದೇಶಗಳನ್ನು ಪಾಲಿಸುತ್ತದೆ.

ಮರ ಏರುವಾಗ ಯಂತ್ರಕ್ಕೆ ದೃಢತೆ ಕೊಡಲು ಒಂದು ಸ್ಪ್ರಿಂಗ್ ಕಂಟ್ರೋಲ್ ಮೆಕ್ಯಾನಿಸಂ ಇದೆ. ಇದರಿಂದಾಗಿ ದಪ್ಪ ಹೆಚ್ಚು ಅಥವಾ ಕಮ್ಮಿ ಇರುವ ಮರಗಳಿಗೂ  ಇದು   ಅಜೆಸ್ಟ್   ಆಗಿಕೊಳ್ಳುತ್ತದೆ.

ಹೊಸದಾಗಿ ಒಂದು ಮರಕ್ಕೆ ಯಂತ್ರವನ್ನು ಜೋಡಿಸುವಾಗ ಮಾತ್ರ ಸ್ವಲ್ಪ ಕೆಲಸ ಇದೆ. ಆದರೆ ಈ ಕೆಲಸ ಸುಲಭ ಮತ್ತು ಥಟ್ಟನೆ ಆಗುವಂತೆ ಒಂದು ಹ್ಯಾಂಡಲ್ ಕೊಟ್ಟಿದ್ದಾರೆ. ಇದರ ಸಹಾಯದಿಂದ ಈ ಯಂತ್ರವನ್ನು ಅಡಿಕೆ ಮರಕ್ಕೆ ಜೋಡಿಸುವುದು ಅಥವಾ ಮರದಿಂದ ಕಳಚುವುದು ಬಾಗಿಲು ತೆಗೆದು ಹಾಕುವಷ್ಟೇ ಸರಳ, ಸುಲಭ.

ಯಂತ್ರಕ್ಕೆ ಮೂರು ಚಕ್ರಗಳ ಘಟಕ ಜೋಡಿಸಿದ್ದಾರೆ. ಏರುವಾಗ ಒಂದೇ ಸಮನಾದ ಚಲನೆ ಸಿಗುವಂತೆ ಈ ಚಕ್ರಗಳನ್ನು ವಿನ್ಯಾಸಗೊಳಿಸಿದ್ದಾರೆ. ಮೆಶಿನ್ ಯಾವುದೇ ಘಟ್ಟದಲ್ಲಿ ವಾರೆ ಆಗದಂತೆ, ಸ್ಕಿಡ್ ಆಗದಂತೆ ಇವು ನೋಡಿಕೊಳ್ಳುತ್ತವೆ.

ಯಂತ್ರದ ಮೇಲ್ತುದಿಗೆ ಜೋಡಿಸಿರುವ ಗರಗಸದಂತಹ ಹಲ್ಲಿರುವ ವೃತ್ತಾಕಾರದ ಬ್ಲೇಡು ಗೊನೆ ಕೊಯ್ಯುತ್ತದೆ. ಅತಿ ಕೆಳಗಿರುವ ಗೊನೆ ಈ ಬ್ಲೇಡಿನ ಚಲನೆಯಿಂದಾಗಿ ತುಂಡಾಗಿ ಬೀಳುತ್ತದೆ. ಯಂತ್ರ ಗೊನೆಯನ್ನು ಸ್ಪರ್ಶಿಸಿದ ಮೇಲೆ ನಾವು ಕೆಳಗಿನಿಂದ ಆದೇಶ ಕೊಟ್ಟ ಮೇಲಷ್ಟೇ ಗರಗಸ ಬ್ಲೇಡು ಚಲಿಸಲು ತೊಡಗುತ್ತದೆ.

ಯಂತ್ರ ಏರಿ ಇಳಿಯುವಾಗ ಅಡಿಕೆ ಮರದ ಕಾಂಡಕ್ಕೆ ಜಖಂ ಮಾಡುವುದಿಲ್ಲ. ಒಂದು ವೇಳೆ ಏನಾದರೂ ಕಾರಣದಿಂದ ರಿಮೋಟ್ ವ್ಯವಸ್ಥೆ ಕೈ ಕೊಟ್ಟರೂ ಯಂತ್ರಕ್ಕೆ ಜೋಡಿಸಿ ಇಡುವ ಹಗ್ಗದ ಸಹಾಯದಿಂದ ಮರ ಏರದೇನೇ ಅದನ್ನು ಕೆಳಕ್ಕೆ ಇಳಿಸಿಕೊಳ್ಳಬಹುದು. ಮಳೆಗಾಲದಲ್ಲೂ ತಕ್ಕ ಮಟ್ಟಿಗೆ ಚೆನ್ನಾಗಿಯೇ ಈ ಯಂತ್ರ ಮರ ಏರಿ ಇಳಿಯಬಲ್ಲುದು. ಇದಲ್ಲದೆ ಇನ್ನೂ ಕೆಲವು ಸುರಕ್ಷಾ ವ್ಯವಸ್ಥೆಗಳನ್ನು ಸುರೇಶ್ ಯಂತ್ರದಲ್ಲಿ ಅಳವಡಿಸಿದ್ದಾರೆ.

ಸುರೇಶ್ ವೃತ್ತಿಯಿಂದ ರಬ್ಬರ್ ಟ್ಯಾಪರ್. ಆದರೆ ಅವರ ಮನಸ್ಸು ಯಾವಾಗಲೂ ಹೊಸಹೊಸ ಸಂಶೋಧನೆಯಲ್ಲೇ ಮಗ್ನ.'' ಸುರೇಶ್ ಅವರನ್ನು ಇತರರಿಂದ ವಿಭಿನ್ನರಾಗಿಸುವುದು ಸಂಶೋಧನೆಗಳ ಬಗ್ಗೆ ಅವರಿಗಿರುವ ಅತ್ಯಾಸಕ್ತಿ'' ಎನ್ನುತ್ತಾರೆ ಮಲಪ್ಪುರಂನ ನಬಾರ್ಡ್ ಡೆಪ್ಯುಟಿ ಡಿಸ್ಟ್ರಿಕ್ಟ್ ಮ್ಯಾನೇಜರ್ ಜೇಮ್ಸ್ ಜಾರ್ಜ್.

ಹೈದರಾಬಾದಿನಲ್ಲಿ ತಿಂಗಳುಗಳ ಹಿಂದೆ ನಡೆದ `ರೂರಲ್   ಇನ್ನೊವೇಶನ್   ಸ್ಟಾರ್ಟ್  ಅಪ್ ಕಾಂಕ್ಲೇವ್' ನಲ್ಲಿ ಈ ಯಂತ್ರಕ್ಕೆ ಕೃಷಿ ವಿಭಾಗದಲ್ಲಿ ಒಂದು ಲಕ್ಷ ರೂಪಾಯಿಯ ಪ್ರಥಮ ಪ್ರಶಸ್ತಿ ಸಿಕ್ಕಿತ್ತು. ``ಸುರೇಶ್ ಅವರ ಹಿಂದಿನ ಮನುಷ್ಯನನ್ನು ಕೂರಿಸಿ ಮೇಲೇರುವ ಅಡಿಕೆ ಕೊಯ್ಯಲು ಬಳಸಬಹುದಾದ ಯಂತ್ರ ನೋಡಿದಾಗಲೇ ನನಗೆ ಅಚ್ಚರಿ ಎನಿಸಿತ್ತು'' ಎನ್ನುತ್ತಾರೆ ಡಾ. ಹಬೀಬುರ್ ರೆಹಮಾನ್. ಇವರು ಮಲಪ್ಪುರಂ ಕೆವಿಕೆಯ ಮುಖ್ಯಸ್ಥರು.

ಯಂತ್ರದ ಈ ಯಶಸ್ವಿ ಪ್ರಥಮ ಮಾದರಿ (ಪ್ರೊಟೋಟೈಪ್) 22 ಕಿಲೋ ಭಾರ ಇದೆ. ಮಿಶ್ರ ಲೋಹದ ಬಿಡಿಭಾಗ ಬಳಸಿ ಇದನ್ನು  ಹದಿನೈದು ಕಿಲೋಗೆ ಇಳಿಸಲು ಸಾಧ್ಯವಾಗಬಹುದು. ಆದರೆ ಹಾಗೆ ಮಾಡಿ ಮಾರುಕಟ್ಟೆಗೆ ಇಳಿಸಲು ಗಣನೀಯ ವೆಚ್ಚ ಮತ್ತು ಸುಸಜ್ಜಿತ ತಯಾರಿ ವ್ಯವಸ್ಥೆ ಬೇಕು.

ಸುರೇಶ್ ಪಿ.ವಿ - ಮಲೆಯಾಳಂ ಮಾತ್ರ  81139 50968 (ವಾಟ್ಸಪ್ ಇದೆ)

ಲೇಖಕರು ಕೇರಳದ ಮಲಪ್ಪುರಂ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರ(ಕೇವಿಕೆ)ದಲ್ಲಿ

ಸಹಾಯಕ ಪ್ರಾಧ್ಯಾಪಕರು (ಕೃಷಿ ವಿಸ್ತರಣೆ)