ADD

Back To Free Articles

October-2018

ಕಲ್ಯಾರು `ರಾಜಾ ಕುಳ್ಳ' ತೆಂಗು

ಬಂಟ್ವಾಳದ ತೋಟದಲ್ಲಿ ಹಲವು ನೈಸರ್ಗಿಕ ಕುಬ್ಜ ತೆಂಗಿನ ಮರಗಳಿವೆ. ಎರಡು ದಶಕ ದಾಟಿದರೂ ಎಂಟರಿಂದ ಹನ್ನೆರಡಡಿಯಲ್ಲೇ ಗೊನೆಗಳು. ತೆಂಗು ವಿಜ್ಞಾನಿಗಳ ಪರೀಕ್ಷೆ ಪಾಸಾದರೆ ಇದು ತೆಂಗು ಕೃಷಿಕರಿಗೆ ಇಷ್ಟ ತಳಿಯಾಗಬಲ್ಲುದು.

 
no image
 

ಬೇಕೆಂದಾಗ ಹೋಗಿ ಕೈಯಲ್ಲಿ ತಿರುವಿ ಬೊಂಡ ಕೊಯ್ಯಬಲ್ಲ ತೆಂಗಿನ ಮರ ಇದೆಯೇ? ಇಂಥ ತಳಿಗಳು ಅಪರೂಪ. ಕೆಲ ತಳಿಗಳು ಆರಂಭದಲ್ಲಿ ಚಿಕ್ಕ ಗಿಡ ಆಗಿದ್ದರೂ ಕಾಲಕ್ರಮೇಣ ಉದ್ದಕ್ಕೆ ಬೆಳೆದು ನೆಟ್ಟವನ ಕೈಯೆಟಕು ಮೀರುತ್ತವೆ. ಥಾಯ್‍ಲ್ಯಾಂಡಿನ ಕುಬ್ಜ ತಳಿ ಎಂಬ ಹೆಸರಿನಲ್ಲಿ ಕೇರಳದ ಕೆಲವು ನರ್ಸರಿಗಳು ಭಾರೀ ಬೆಲೆಗೆ ತೆಂಗಿನ ಗಿಡ ಪೂರೈಸುತ್ತಿವೆ. ಅವರ ಜಾಹೀರಾತಿನ ಫೋಟೋ ನೋಡಿದರೆ ಯಾವುದೇ ಕೃಷಿಕನಿಗೆ `ಇದು ನನಗೂ ಬೇಕು' ಅನಿಸುವಂತಿದೆ. ಆದರೆ ಈ ಗಿಡಗಳ, ಫೋಟೋಗಳ ಸಾಚಾತನ ಗೊತ್ತಾಗಬೇಕಾದರೆ ದಶಕಾರ್ಧ ಕಳೆಯಬೇಕೇನೋ!

ಇಲ್ಲಿ ನೋಡಿ, ಅಚ್ಚರಿ ಹುಟ್ಟಿಸುವಷ್ಟು ಕುಬ್ಜ ತಳಿಯ ಒಂದಲ್ಲ ಎಂಟು ಮರಗಳಿರುವ ತೋಟವೇ ನಮ್ಮ ಬಂಟ್ವಾಳ ತಾಲೂಕಿನ ಹಳ್ಳಿಯೊಂದರಲ್ಲಿ ಇದೆ. ಈ ಮರಗಳಿಂದ ಸೀಯಾಳ ಕೊಯ್ಯಲು ಮರ ಏರಬೇಕಿಲ್ಲ. ಹೆಣ್ಮಕ್ಕಳೂ ಕೊಯ್ಯಬಹುದು. ಹೋಗಿ ಕೈಚಾಚಿ ಎಳನೀರನ್ನು ತಿರುವಿ ತಿರುವಿ ಕಿತ್ತರೆ ಸೈ.

ಈ ಕಲ್ಪವೃಕ್ಷಗಳು ರಾಜಾ ಬಂಟ್ವಾಳ ಅವರದು. ರಾಜಾ  ದಶಕಗಳಿಂದ  ಉದಯವಾಣಿ  ವರದಿಗಾರರು. ಆದರೆ ಅವರಿಗೆ ತನ್ನ ಈ ಕುಬ್ಜ ಸಂಪತ್ತಿನ  ಅರಿವಾದದ್ದು  ಈಚೆಗಿನ   ಎರಡು ವರ್ಷಗಳಲ್ಲಿ. ``ಕೆಲವು ಮರಗಳು ಈಚೆಗೆ ನನ್ನ ಎಟಕನ್ನು ಮೀರಿ ಬೆಳೆಯಹತ್ತಿವೆ. ಮಗ ರಜತ್ ನನಗಿಂತಲೂ ಉದ್ದ. ಆತ ಇನ್ನೂ ಈ ಮರಗಳಿಂದ ಕೈಯಿಂದಲೇ ಕೊಯ್ಯುವುದಿದೆ'', ರಾಜಾ ನೆನೆಯುತ್ತಾರೆ.

ಈ ಮರಗಳ ತಾಯಿಮರ ಊರ ತಳಿಯದು. ``ನಾನು ಚಿಕ್ಕವನಿದ್ದಾಗಲೇ ಅದು ಬೆಳೆ ಕೊಡುತ್ತಿತ್ತು. ವಯಸ್ಸು ಏನಿಲ್ಲವೆಂದರೂ ಎಪ್ಪತ್ತು ಪ್ಲಸ್'', ಬೊಟ್ಟು ಮಾಡುತ್ತಾರೆ ರಾಜಾ.  ಈ ಮರ ಅಂದಾಜು  45 ಅಡಿ  ಎತ್ತರ  ಇದೆಯಷ್ಟೇ.  1993ರಲ್ಲಿ  ಇವರಿಗೆ ಎರಡೆಕ್ರೆ ಜಮೀನು ಸಿಕ್ಕಿತು. ಎರಡು ವರ್ಷಾನಂತರ ಇದನ್ನು ಎರಡು ಪ್ಲಾಟುಗಳಾಗಿಸಿ ಎಂಭತ್ತು ತೆಂಗಿನ ಗಿಡ ನೆಟ್ಟರು. ಹಾಗೆ ನೆಡುವಾಗ ಈ ತಾಯಿಮರದಿಂದ ಆಯ್ದ ಒಂದು ಗೊನೆ ತೆಂಗಿನಕಾಯಿಯಿಂದ ಮಾಡಿದ ಗಿಡಗಳೂ ಸೇರಿಕೊಂಡುವು. ಸುಮಾರು ಐದು ವರ್ಷಗಳಲ್ಲಿ ಫಸಲಿಗೆ ಸುರು.

ರಾಜಾ ಅವರ ತೋಟ ಬೀಸಿ ರೋಡ್ ಪೇಟೆಯಿಂದ ಎಂಟು ಕಿಲೋಮೀಟರ್ ದೂರದಲ್ಲಿದೆ. ನರಿಕೊಂಬು ಗ್ರಾಮದ ಕಲ್ಯಾರು ಇವರ ಊರು. ಈ ಮರಗಳಿಗೆ ಹಟ್ಟಿಗೊಬ್ಬರ ಮತ್ತು ನೀರಾವರಿ ಕೊಡುತ್ತಿದ್ದಾರೆ. ತೋಟದ ಕೆಲವು ಗಿಡಗಳು ಕುಬ್ಜವಾಗಿಯೇ ಉಳಿದುವು. ದಶಕಗಳು ಸಂದರೂ ಈ ವಿಶೇಷ ಇವರ ಗಮನಕ್ಕೆ ಬಂದಿರಲಿಲ್ಲ.

ಕಳೆದ ವರ್ಷದಿಂದೀಚೆಗೆ ತೆಂಗು ಬೆಳೆಯಲ್ಲಿ ಅನುಭವ ಇರುವ ಕೆಲವರು ಇವರ ಮನೆಗೆ ಭೇಟಿ ಕೊಟ್ಟಿದ್ದರು. ಒಂದೇ ಪ್ರಾಯದ ಮರಗಳ ಬೆಳವಣಿಗೆಯಲ್ಲಿ ಬಹುದೊಡ್ಡ ವ್ಯತ್ಯಾಸ ಇರುವುದು ಅವರಿಗೆ ಅಚ್ಚರಿ ತಂದಿತು. ಅಂದಿನಿಂದ ರಾಜಾ ತನ್ನ ಗಿಡಗಳ `ಕುಳ್ಳತನ'ದ ಬಗ್ಗೆ ಹೆಚ್ಚು ಹೆಚ್ಚು ಯೋಚಿಸಲು ಸುರು ಮಾಡಿದರು.

ಇವರ ಹಳೆ ತಾಯಿಮರದ ಗಿಡಗಳು ತೋಟದಲ್ಲಿ ಅಂದಾಜು  ಇಪ್ಪತ್ತು  ಇರಬಹುದು. ಇವುಗಳಲ್ಲಿ ಎಂಟು ಮರಗಳಂತೂ ತುಂಬಾ ಕುಳ್ಳರು. ಅತಿ ಕುಳ್ಳ ಮರದ ಗೊನೆ ಏಳೆಂಟು ಅಡಿ ಎತ್ತರದಲ್ಲಿದೆ. ಕೆಲವು ಮರಗಳದ್ದು ಇನ್ನೂ ಎರಡಡಿ ಜಾಸ್ತಿ, ಅಷ್ಟೇ. ಇವರ ನೆನಪು ಸರಿಯಾದರೆ ಇವುಗಳ ವಯಸ್ಸು 23 ಅಂತೂ ಆಗಿದೆ. ಇವುಗಳ ಜತೆಗೇ ನೆಟ್ಟ ಇತರ ಮರಗಳ ಸಂತತಿ ಸರಿಸುಮಾರು 25 ಅಡಿ, ಅಂದರೆ  ಇದರ  ದುಪ್ಪಟ್ಟು  ಎತ್ತರ ಏರಿದೆ.

``ಈ ಮರಗಳ ತೆಂಗು ಎಣ್ಣೆಗೆ ಒಳ್ಳೆಯದು; ತಿರುಳು ದಪ್ಪ'' ಎನ್ನುತ್ತಾರೆ ರಾಜಾ. ಆದರೆ ಈ ಮರಗಳ ವಾರ್ಷಿಕ ಸರಾಸರಿ ಇಳುವರಿ, ಈ ಕುಬ್ಜ ತಳಿಯ ತೆಂಗಿನಲ್ಲಿ ಏನಾದರೂ ವಿಶೇಷ ಇದೆಯೇ - ಇತ್ಯಾದಿಗಳ ಬಗ್ಗೆ ಅವರು ಈ ವರೆಗೆ ಅಷ್ಟು ಗಮನ ಹರಿಸಿಲ್ಲ.

ಪ್ರಥಮ ನೋಟಕ್ಕೆ ಈ ಕುಬ್ಜ ತಳಿ ತುಂಬ ಕುತೂಹಲದಾಯಕ ಅನಿಸುತ್ತಿದೆ. ಆದರೆ ತೆಂಗು ವಿಜ್ಞಾನಿಗಳು ಇದನ್ನು ಇನ್ನೂ ಹೆಚ್ಚು ಅಧ್ಯಯನ ಮಾಡಬೇಕಿದೆ. ಈ ಮರದ ಉತ್ಪಾದಕತೆ ಹೇಗಿದೆ, ಅಗತ್ಯಕ್ಕೆ ತಕ್ಕ ಗೊಬ್ಬರ ಉಣಿಸಿ, ನಿರ್ವಹಣೆ ಮಾಡಿದರೆ ಇಳುವರಿ ಹೆಚ್ಚುತ್ತದೆಯೇ ಇತ್ಯಾದಿಗಳನ್ನು ಕಂಡುಕೊಳ್ಳಬೇಕಿದೆ.

ನಮ್ಮ ತೆಂಗು ವಿಜ್ಞಾನಿಗಳು ಆದಷ್ಟು ಶೀಘ್ರ ಈ ತಳಿಯ ಬಗ್ಗೆ ಅಧ್ಯಯನ ಮಾಡಿದರೆ ಒಳಿತು. ಒಂದು ವೇಳೆ ಇದು ಭರವಸೆದಾಯಕ ತಳಿ ಎಂದೆನಿಸಿದರೆ ಬೆಳೆಗಾರರ ಹೆಸರಿನಲ್ಲಿ ಅದನ್ನು ನೊಂದಾವಣೆ ಮಾಡುವ ಅವಕಾಶವೂ ಇರಬೇಕಲ್ಲಾ? ವಿಜ್ಞಾನಿ ವೃಂದ ಹಸಿರು ನಿಶಾನೆ ತೋರಿದರೆ, ನಮ್ಮೂರಿನದೇ ಒಂದು  ಬೆಳೆಗಾರಸ್ನೇಹಿ ತೆಂಗಿನ ತಳಿ ಕೃಷಿಕ ಸಮುದಾಯಕ್ಕೆ ಸಿಕ್ಕಂತಾಗಬಹುದು.

ರಾಜಾ ಬಂಟ್ವಾಳ - 94803 46215 - (ಅನುಕೂಲ ಸಮಯ ಬೆಳಗ್ಗೆ 6 - 7)

----------------------------------------------------------------------------------------------------------------

ಅಂದಾಜು ಇಪ್ಪತ್ತಮೂರು ವರ್ಷ, ಎತ್ತರ ಎಂಟರಿಂದ ಹನ್ನೆರಡು ಅಡಿ.

ಒಂದೂವರೆ ದಶಕ ಕಾಲ ನಿಂತಲ್ಲಿಂದಲೇ ಕೊಯ್ಲು.

ಇದೇ ಪ್ರಾಯದ ಉಳಿದ ತಳಿಗಳು ದುಪ್ಪಟ್ಟು ಎತ್ತರ ಇವೆ.

ತೆಂಗು ವಿಜ್ಞಾನಿಗಳ ಅಧ್ಯಯನಕ್ಕೆ ಅರ್ಹ.

ಉತ್ಪಾದಕತೆ ಎಷ್ಟೆಂದು ತಿಳಿದುಕೊಳ್ಳಬೇಕಿದೆ.

ಅರ್ಹತೆ ಇದ್ದರೆ ಐಪಿಆರ್ ನೋಂದಾವಣೆ ಸಾಧ್ಯವೇ?