ADD

Back To Free Articles

October-2018

ಅತಿ ಹಸ್ತಕ್ಷೇಪದ ಅನಂತರಫಲ

ಮೊನ್ನೆಮೊನ್ನೆ ಕೇರಳ ಕೊಡಗುಗಳಲ್ಲಿ ಸಂಭವಿಸಿದ ದುರಂತ ನಾವು ಈ ವರೆಗೆ ಕಂಡು ಕೇಳಿರದಂಥದ್ದು. ಭೂಕುಸಿತ ಅಥವಾ ನೆರೆ ನಮಗೆ ಹೊಸತಲ್ಲ. ಆದರೆ ಈ ಬಾರಿ ಅಲ್ಲಿ ನಡೆದದ್ದು ಅಭೂತಪೂರ್ವ ನಾಶ, ಸಂಕಟ.

 
no image
 

ಮೊನ್ನೆಮೊನ್ನೆ ಕೇರಳ ಕೊಡಗುಗಳಲ್ಲಿ ಸಂಭವಿಸಿದ ದುರಂತ ನಾವು ಈ ವರೆಗೆ ಕಂಡು ಕೇಳಿರದಂಥದ್ದು. ಭೂಕುಸಿತ ಅಥವಾ ನೆರೆ ನಮಗೆ ಹೊಸತಲ್ಲ. ಆದರೆ ಈ ಬಾರಿ ಅಲ್ಲಿ ನಡೆದದ್ದು ಅಭೂತಪೂರ್ವ ನಾಶ, ಸಂಕಟ. ಕಣ್ಣೆದುರೇ ಬಂಧುಮಿತ್ರರನ್ನು ಕಳೆದುಕೊಳ್ಳುವ, ಸಹಾಯಕ್ಕಾಗಿ ಏನೂ ಮಾಡಲಾಗದ ಆ ಅಸಹಾಯಕ ಸ್ಥಿತಿ ಯಾರಿಗೂ ಬೇಡ.

ಈ ದುರಂತಗಳ ಕಾರಣದ ಬಗ್ಗೆ ಮಾಧ್ಯಮ - ಟೀವಿಗಳಲ್ಲಿ ಚರ್ಚೆಗಳಾಗುತ್ತಿವೆ. ಮೇಲ್ನೋಟಕ್ಕೆ ಈ ಬಾರಿಯ ಅತಿವೃಷ್ಟಿಯೇ ಈ ದುರಂತಗಳಿಗೆ ಕಾರಣ ಎಂದು ಅನಿಸಲೂಬಹುದು. ಅತಿವೃಷ್ಟಿಯ ಪಾತ್ರ ಇದ್ದೇ ಇದ್ದರೂ, ಎರಡೂ ಕಡೆ ಇಷ್ಟು ನಾಶ ನಷ್ಟ ಸಂಭವಿಸಲು ತಪ್ಪು ನಿರ್ಧಾರ, ತಪ್ಪು ಕೃತ್ಯಗಳು ಎನ್ನುವುದು ಸ್ಪಷ್ಟ. ಕೇರಳದಲ್ಲಿ ಒಮ್ಮೆಲೇ ಎಲ್ಲಾ ಅಣೆಕಟ್ಟುಗಳ ನೀರನ್ನು ಹೊರಬಿಟ್ಟದ್ದು ಮೂಲ ಕಾರಣವಾದರೆ, ಕೊಡಗಿನಲ್ಲಿ ಯಂತ್ರ ಬಳಸಿ ಗುಡ್ಡಗಳನ್ನು ದೊಡ್ಡ ರೀತಿಯಲ್ಲಿ ಬಗೆದದ್ದು, ಹಸಿರುಕೊಡೆಯ ನಾಶ - ಮುಂತಾದ ಕಾರಣಗಳು ಸೇರಿಕೊಂಡಿವೆ.

ಮೂವತ್ತು ಡಿಗ್ರಿಗಿಂತ ಹೆಚ್ಚು ಇಳಿಜಾರಿರುವ ಜಾಗದಲ್ಲಿ ನೀರಿಂಗಿಸಲು ಹಾರೆ, ಪಿಕ್ಕಾಸು ಮತ್ತು ಜೇಸೀಬಿ ಬಳಸಿ ಮಾಡುವ ಕೃತಕ ವಿಧಾನಗಳು ಸಲ್ಲವು. ಅಲ್ಲಿ ತಾಯಿ ಬೇರಿರುವ ಗಿಡಮರಗಳನ್ನು ನೆಟ್ಟು ಮಣ್ಣಿನ ಮೇಲ್ಪದರನ್ನು ಭದ್ರಗೊಳಿಸಬೇಕು ಎಂಬ ಎಚ್ಚರಿಕೆ ಹಿಂದಿನಿಂದಲೂ ಇದೆ. ನಾವದನ್ನು ಅನುಕೂಲಕ್ಕೆ ತಕ್ಕಂತೆ ತಿರುಚುತ್ತಾ ಸಾಗಿದ್ದೇವೆ. ರಾಜಕಾರಿಣಿ ಮತ್ತು ಧನದಾಹಿಗಳ ಕೂಟ ದಟ್ಟಾರಣ್ಯವನ್ನು ಅದೆಷ್ಟು ಕಡೆ ಬಗೆದು ಬೇಕಾಬಿಟ್ಟಿಯಾಗಿ ಜೇಸೀಬಿ ಬಳಸಿ ರೆಸಾರ್ಟ್ ನಿರ್ಮಿಸಿಲ್ಲ? ನಮ್ಮ ಪ್ರವಾಸಿ ತಾಣಗಳಲ್ಲಿ ಅಣಬೆಯಂತೆ ಮೇಲೇರುವ ಕಟ್ಟಡಗಳು ನಿಯಮಗಳನ್ನು ಹೇಗೆ ಗಾಳಿಗೆ ತೂರುತ್ತಿವೆ?

ಈ ದುರಂತ ಕೊಡಗು - ಕೇರಳದಲ್ಲಿ ಮಾತ್ರ ಆಗಿದೆ, ಉಳಿದೆಡೆಯೆಲ್ಲ ಸುರಕ್ಷಿತ ಎಂದು ನಾವು ಭಾವಿಸಬೇಕಾಗಿಲ್ಲ. ಕೇರಳದ ವಯನಾಡಿನಲ್ಲಿ ಅದಕ್ಕೂ ಮೊದಲು ಭೂಕುಸಿತದಿಂದ ಹೆದ್ದಾರಿ ಹಲವು ಬಾರಿ ಬಂದ್ ಆಯಿತು. ಪಶ್ಚಿಮ ಘಟ್ಟವನ್ನು ನಾವು ಬದುಕಿಗೆ ಅನಿವಾರ್ಯವಾದ ಹಸ್ತಕ್ಷೇಪ ಮಾಡÀಬಾರದ ಪವಿತ್ರ ಸ್ಥಳ ಎಂದು ತಿಳಿದುಕೊಳ್ಳದ ವರೆಗೆ ಇಂಥ ಅಪಾಯ ನಮ್ಮ ಪಕ್ಕದಲ್ಲೇ ಕಾದಿರುತ್ತದೆ.

ಕೊಳವೆಬಾವಿಗಳ ದಟ್ಟಣೆಯೂ ನಮಗೆ ಬೇರೆಬೇರೆ ರೀತಿಗಳಲ್ಲಿ ಅಪಾಯ ತಾರದಿರದು. ಭೂಮಿಗೆ ನಾವು ಅಷ್ಟೊಂದು ಕನ್ನ ಕೊರೆದಿದ್ದೇವೆ. ಈ ಸಂಪಾದಕೀಯ ಬರೆಯೋ ಹೊತ್ತಿಗೆ ಏಳೆಂಟು ವಾರಗಳ ಅತಿವೃಷ್ಟಿಯ ಅಧ್ಯಾಯದ ಬೆನ್ನಲ್ಲೇ ನದಿ, ಬಾವಿಗಳು ಅತ್ಯಾಶ್ಚರ್ಯಕರ ರೀತಿಯಲ್ಲಿ ಬತ್ತುತ್ತಿರುವ ಆಘಾತಕಾರಿ ಸುದ್ದಿ ಬರುತ್ತಿದೆ. ದಕ್ಷಿಣ ಕನ್ನಡದಲ್ಲೂ ಇಂಥ ವಿಶ್ಲೇಷಿಸಲು ಸುಲಭವಲ್ಲದ ನದಿ - ತೊರೆ ಬತ್ತುವ ವಿದ್ಯಮಾನಗಳ ಸುದ್ದಿ ಬರುತ್ತಿದೆ. ಏನೇ ಇದ್ದರೂ, ಆಧುನಿಕ ಯಂತ್ರಗಳನ್ನು ಬಳಸಿ ಪ್ರಕೃತಿಯಲ್ಲಿ ಅಮಿತ ಹಸ್ತಕ್ಷೇಪ ಮಾಡುವುದು ಅಸಹನೀಯ ತಿರುಗೇಟಿಗೆ ಕಾರಣವಾಗುತ್ತದೆ ಎನ್ನುವುದನ್ನಾದರೂ ಅರ್ಥ ಮಾಡಿಕೊಂಡರೆ ಒಳ್ಳೆಯದು. ದುರಂತವೆಂದರೆ, ಪ್ರಕೃತಿಯ ಜತೆ ತಪ್ಪಿ ನಡೆಯುವವರಾರೋ, ಶಿಕ್ಷೆ ಯಾರಿಗೋ!

ಮೇಲೆ ಪ್ರಸ್ತಾಪಿಸಿದಂತಹ ದುರಂತ ಅಲ್ಲದಿದ್ದರೂ ಈ ಬಾರಿಯ ಎಡೆಬಿಡದ ಮಳೆ ಅಡಿಕೆ ಬೆಳೆಗಾರರಿಗೆ ಎಲ್ಲೆಡೆ ಆರ್ಥಿಕ ಸಂಕಟ ತಂದೊಡ್ಡಿದೆ. ಹಲವರ ವರ್ಷದ ಯತ್ನವೆಲ್ಲವನ್ನು ಕೊಳೆರೋಗ ಶೂನ್ಯವಾಗಿಸಿದೆ. ವರ್ಷದಿಂದ ವರ್ಷಕ್ಕೆ ಮರ ಏರಿ ಔಷಧ ಸಿಂಪಡಿಸುವುದು ಕಷ್ಟವೂ ದುಬಾರಿಯೂ ಆಗುತ್ತಿದೆ. ಒತ್ತಡದ ನಡುವೆ ಕೆಲಸದ ಕ್ಷಮತೆ  ಇಳಿಯುತ್ತಿದೆ. ಬುಡಕ್ಕೆ ಹಾಕಿ ರೋಗ ನಿಯಂತ್ರಿಸುವ ಮದ್ದಿನ ಬಗ್ಗೆ ಅಧ್ಯಯನ ತೀವ್ರಗೊಳಿಸಬೇಕಾದ ತುರ್ತು ಇದೆ. ನಮ್ಮ ಸಂಶೋಧನಾ ಸಂಸ್ಥೆ ಸಿಪಿಸಿಆರೈ ಈ ಬಗ್ಗೆ ಉತ್ಸಾಹ ತೆಗೆದುಕೊಳ್ಳಬೇಕು.

ಈ ನಡುವೆ ಬೋರ್ಡೋ ಮಿಶ್ರಣದ ಒಳಸುರಿ, ತಯಾರಿ ರೀತಿಗಳಲ್ಲೂ ಹಲವು ಗೊಂದಲಗಳಿವೆ. ಶಿಫಾರಸು ಮಾಡಿದ ಪ್ರಮಾಣಕ್ಕಿಂತ ಹೆಚ್ಚು ಸುಣ್ಣ ಸೇರಿಸಿ ಫಲಿತಾಂಶ ಪಡೆದಿದ್ದೇವೆ ಎನ್ನುವವರ ಸಂಖ್ಯೆ ಹೆಚ್ಚುತ್ತಿದೆ. ಸೇರಿಸಬೇಕಾದ ಸುಣ್ಣದ ತೂಕಕ್ಕಿಂತಲೂ ರಸಸಾರ ಸಮತೋಲನ ಮಾಡುವುದಕ್ಕೆ ಗಮನ ಕೊಡಬೇಕು ಎನ್ನುವ ವಾದ ತಪ್ಪೆನ್ನುವಂತಿಲ್ಲ. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ``ಬೋರ್ಡೋ ಬಗ್ಗೆ ಬೇಕಾದಷ್ಟು ಅಧ್ಯಯನ ಆಗಲೇ ನಡೆಸಿದ್ದೇವೆ'' ಎಂಬ ಪೊಳ್ಳು ಬಿಂಕ ಬಿಟ್ಟು ವಿಜ್ಞಾನಿಗಳು ಹೊಸದಾಗಿ ಇದರ ಪುನರ್ವಿಮರ್ಶೆ ಮಾಡುವುದು ರೈತಸ್ನೇಹಿ ಹೆಜ್ಜೆ. ಅದು ನಿಜವಾದ ವಿಜ್ಞಾನಿಗಳಿಗೆ ಭೂಷಣವೂ ಹೌದು. ಬೋರ್ಡೋದ ಜತೆಜತೆಗೆ ಕೊಳೆರೋಗಕ್ಕೆ ಹೆಚ್ಚು ಹೆಚ್ಚು ಕೃಷಿಕರು ಬಳಸುತ್ತಿರುವ ಪರ್ಯಾಯ ಮದ್ದುಗಳ ಕ್ಷಮತೆ, ಡೋಸೇಜುಗಳ ಅಧ್ಯಯನವೂ ನಡೆಯಲಿ.

ಅಡಿಕೆಗೆ ಔಷಧ ಸಿಂಪಡಣೆಗೆ ಡ್ರೋನಿನ ಕಡೆ ಆಸೆಗಣ್ಣಿನಿಂದ ನೋಡುವವರು ಒಂದಷ್ಟು ಮಂದಿ ಇದ್ದಂತಿದೆ. ಅಡಿಕೆ ಗೊನೆಗೆ ಸಿಂಪಡಣೆಗಿರುವ ವಾಸ್ತವಿಕ ಅಡಚಣೆಗಳನ್ನು ಗಮನಿಸಿದರೆ ಈ ದಾರಿ ಎಷ್ಟು ಯಶಸ್ವಿ ಆಗಬಹುದು ಎಂಬ ಸಹಜ ಶಂಕೆ ಏಳುತ್ತದೆ. ಮಾತ್ರವಲ್ಲ ಹೈಟೆಕ್ ತಂತ್ರಗಳು ಎಲ್ಲರಿಗೂ ಎಟಕದು, ಸ್ವಲ್ಪ ತಾಳ ತಪ್ಪಿದರೂ ಅದರಲ್ಲಿ ತಲೆನೋವೂ ‘ಹೈ’ಯೇ ಎಂಬುದನ್ನು ಮರೆಯುವಂತಿಲ್ಲ. ಕೊಳೆರೋಗ ಇನ್ನೊಮ್ಮೆ ಈ ವರ್ಷದಂತಹ ಸಂಕಟಕರ ಅಧ್ಯಾಯ ತೆರೆಯುವ ಮುನ್ನ ನಮ್ಮ ವಿಜ್ಞಾನಿಗಳು ಈಗ ಅದರ ನಿಯಂತ್ರಣಕ್ಕಿರುವ ಅಡ್ಡಿ ಆತಂಕಗಳನ್ನು ಕುಗ್ಗಿಸಿ ಕೊಡುವತ್ತ ಛಲದಿಂದ ದುಡಿಯಬೇಕಿದೆ.

- ಶ್ರೀ ಪಡ್ರೆ                                                    

shreepadre@gmail.com