ADD

Back To Free Articles

September-2018

ಹಲಸು : ಸವಾಲು ಗೆದ್ದರೆ ಅವಕಾಶ ಅಪಾರ

ಹಲಸಿಗೇ ಹೊಸಬ ಮೆಕ್ಸಿಕೋದ ಸಾಧನೆ ಈ ಬಾರಿಯ ಮುಖಚಿತ್ರದಲ್ಲಿದೆ. ಆ ದೇಶದ ಹಲಸು ರಂಗದ ಬಗ್ಗೆ ಇದು ನಮ್ಮ ಮೂರನೆಯ ಎಕ್ಸ್ ಕ್ಲೂಸಿವ್ ಮುಖಪುಟ

 
no image
 

ಹುಶ: ಹಿಂದೆಂದಿಗಿಂತಲೂ ಹಲಸು ಈ ಋತುವಿನಲ್ಲಿ ಹೆಚ್ಚು ಜನ ಒಲುಮೆ ಪಡೆದು ಪ್ರಸಿದ್ಧವಾಗುತ್ತಿದೆ. ಇದಕ್ಕೆ ಒಂದು ಕಾರಣ ಕೇರಳ ರಾಜ್ಯ ಹಲಸನ್ನು ಅಧಿಕೃತ ಫಲ ಎಂದು ಘೋಷಿಸಿ ಅದರ ಬಗ್ಗೆ ಹೆಚ್ಚಿನ ಗಮನ ಕೊಡತೊಡಗಿರುವುದು. ಈಚೆಗೆ ಮೇಘಾಲಯ `ಹಲಸು ಮಿಶನ್' ಆರಂಭಿಸಿ ತಾನೂ ಹಲಸಿಗೆ ಮಾನ ತರಲು ಹೊರಟಿದೆ.

ಹಲಸಿಗೇ ಹೊಸಬ ಮೆಕ್ಸಿಕೋದ ಸಾಧನೆ ಈ ಬಾರಿಯ ಮುಖಚಿತ್ರದಲ್ಲಿದೆ. ಆ ದೇಶದ ಹಲಸು ರಂಗದ ಬಗ್ಗೆ ಇದು ನಮ್ಮ ಮೂರನೆಯ ಎಕ್ಸ್ ಕ್ಲೂಸಿವ್ ಮುಖಪುಟ. ಅವರು ಕೊಯ್ಲು, ಕೊಯ್ಲೋತ್ತರ ಕ್ರಿಯೆ ಮತ್ತು ಸಾಗಾಟದಲ್ಲಿ ತೆಗೆದುಕೊಳ್ಳುವ ಎಚ್ಚರ ಗಮನಿಸಿ. ಈ ಕಾರಣದಿಂದ ಅಮೆರಿಕನ್ ಮಾರುಕಟ್ಟೆಯಲ್ಲಿ ದಶಕಗಳೊಳಗೇ ಅವರಿಗೆ ಬೇರು ಬಿಟ್ಟು ಗಟ್ಟಿಯಾಗಲು ಸಾಧ್ಯವಾಗಿದೆ.

ನಮ್ಮ ಹಲಸಿನ ರಂಗ ಇನ್ನೂ ಉನ್ನತಿಗೇರಲು `ಬೇಕು'ಗಳು ಹಲವಿವೆ. ಆ ಪಟ್ಟಿಯಿಂದ ಎರಡನ್ನು ಮಾತ್ರ ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಹಲಸು ಉದ್ಯಮಕ್ಕೆ ಕಚ್ಚಾವಸ್ತುವಾಗುವ ನಿಟ್ಟಿನಲ್ಲಿ ಈಗ ಎದುರಿರುವ ಒಂದು ಮುಖ್ಯ ಸಮಸ್ಯೆ, ಹೊರಗಿನಿಂದಲೇ ಹಲಸಿನ ಒಳಗಿನ ಸ್ಥಿತಿ ತಿಳಿಯದಿರುವುದು. ರಖಂ ಆಗಿ ಕೊಂಡುಕೊಂಡಾಗ ಅದರಲ್ಲಿ ತುಳುವ ಬರಬಹುದು, ಬೆಳೆಯದೆ ಇರುವುದು, ಕೊಯ್ದು ಹಾಕಿರುವುದು ಅಥವಾ ಸೊಳೆ ಪ್ರಮಾಣವೋ, ಗುಣಮಟ್ಟವೋ ಕಮ್ಮಿ ಇರುವ ಹಲಸೂ ಇರಬಹುದು. ಬಿಡಿಸಿ ಸೊಳೆ ಕಿತ್ತಾಗ ಒಂದೊಂದು ಸಲ ಉದ್ಯಮಿಗೆ ಸಿಗುವ ಸಂಸ್ಕರಿಸಬಲ್ಲ ಕಚ್ಚಾವಸ್ತುವಿನ ಅಂಶ ಬೇರೆಬೇರೆ. ತುಂಬ ಸೋಲಲೂಬಹುದು!

ಇದಕ್ಕಿರುವ ಪರಿಹಾರ ಹಲಸಿನ ಸೊಳೆ ಬಿಡಿಸಿಯೇ ಒಯ್ಯುವುದು. ಹೀಗೆ ಬಿಡಿಸುವ ಮೊದಲು, ಕೊಯ್ಲಿನ ಕ್ರಮ, ಸ್ನಾನ, ಉಪಚಾರ  ಮೊದಲಾದ ವೈಜ್ಞಾನಿಕ ವಿಧಿವಿಧಾನಗಳಿವೆ. ಹೀಗೆ ಸೂಕ್ತ ಕ್ರಮದಲ್ಲಿ ಬಿಡಿಸಿ ಸೊಳೆಯಾಗಿಸುವುದನ್ನು ಕನಿಷ್ಠ ಸಂಸ್ಕರಣೆ (ಮಿನಿಮಲ್ ಪ್ರಾಸೆಸಿಂಗ್) ಎನ್ನುತ್ತಾರೆ. ಉದ್ಯಮ ಸ್ವಲ್ಪ ದೂರದಲ್ಲಿದ್ದರೂ ಬಿಡಿಸಿದ ಸೊಳೆಯನ್ನು ಕೋಲ್ಡ್ ರೂಮಿನಲ್ಲಿರಿಸಿ ಬೇಕಾದಾಗ ಶೀತಲ ಟ್ರಕ್ಕಿನಲ್ಲಿ (ರೀಫರ್ ಟ್ರಕ್, ರೆಫ್ರಿಜರೇಟೆಡ್ ಟ್ರಕ್) ಎಷ್ಟು ದೂರ ಬೇಕಾದರೂ ಒಯ್ಯಬಹುದು. ಒಮ್ಮೆ ಸೊಳೆಯಾಗಿಸಿದಾಗ ಗುಣಮಟ್ಟದ ವಿಚಾರದಲ್ಲಿ ಪಾರದರ್ಶಕತೆ ಬರುತ್ತದೆ.

ಈ ವಿಧಾನವು ಉದ್ಯಮಿ ಮತ್ತು ರೈತಸಮುದಾಯ ಇಕ್ಕಡೆಯವರಿಗೂ ಅನುಕೂಲಕರ. ಹೀಗೆ ಮಾಡಿಯೇ ಕೊಡುವ ಕೃಷಿಕ ಗುಂಪುಗಳಿಗೆ ಸುಲಿಯದೆ ಕೊಡುವವರಿಗಿಂತ ಬೇಡಿಕೆ ಹೆಚ್ಚು ಬರುತ್ತದೆ. ಉದ್ಯಮಿಗೆ ಇಡೀ ಹಣ್ಣು ತರುವಾಗ ಆಗುವಂತಹ ಲುಕ್ಸಾನು ಇಲ್ಲವೇ ಇಲ್ಲ. ಮಾತ್ರವಲ್ಲ ಸಂಸ್ಕರಣಪೂರ್ವ ಕೆಲಸ ಹೊರಗುತ್ತಿಗೆಗೆ ಕೊಟ್ಟಂತೆಯೇ ಅನಾಯಾಸವಾಗಿ ಆಗುತ್ತದೆ. ಅದಕ್ಕಾಗಿ ಕಾರ್ಮಿಕರ ನೇಮಕ ಬೇಕಿಲ್ಲ. ತ್ಯಾಜ್ಯ ನಿರ್ವಹಣೆಯ ಕೆಲಸವೂ ಇಲ್ಲ. ಮಾತ್ರವಲ್ಲ, ಅಕಾಲದಲ್ಲೂ ಉತ್ಪನ್ನ ತಯಾರಿ - ಮಾರಾಟ ಅತಿ ದೊಡ್ಡ ಬೋನಸ್ಸು!

``ಇದೆಲ್ಲಾ ನಮ್ಮ ಬಡ ರಾಷ್ಟ್ರದಲ್ಲಿ ನಡೆಯದ ವಿಚಾರ'' ಅಂತೀರಾ? ನಮಗಿಂತ ಬಡ ದೇಶದಲ್ಲಿ ಇದೀಗ ಮಾಮೂಲು. ಕೇರಳದ ಒಬ್ಬ ಉದ್ಯಮಿ ಈ ವರ್ಷ ಈ ದಾರಿ ಅನುಸರಿಸಿ ಗೆದ್ದಿದ್ದಾರೆ. ಆ ಬಗ್ಗೆ ಇನ್ನೊಮ್ಮೆ ಹೇಳೋಣ!

ಈ ವಿಧಾನ ಅನುಸರಿಸಿದಾಗ ಹಲಸಿಗೆ ಇನ್ನೊಂದು ದೊಡ್ಡ ಮಾರಾಟದ ಬಾಗಿಲು ತೆರೆಯುವುದು ಬಹು ದೂರವಲ್ಲ. ಈಗ ಗಿಣ್ಣು, ಅಣಬೆ, ರೆಡಿ ಚಿಕನ್ ಇತ್ಯಾದಿ ಸೂಪರ್ ಮಾರ್ಕೆಟುಗಳ ಚಿಲ್ಡ್ ಚೇಂಬರಿನಿಂದ ತೆಗೆದುಕೊಂಡು ತರಬಹುದು ತಾನೇ? ಹಾಗೆಯೇ ಏಕೆ ಹಣ್ಣುಹಲಸು, ಕಾಯಿಸೊಳೆ ಮತ್ತು ಗುಜ್ಜೆಗಳನ್ನು ಕಾಲು, ಅರ್ಧ ಕಿಲೋದ ಪ್ಯಾಕೆಟುಗಳಲ್ಲಿ ಫ್ರೋಝನ್ ರೂಪದಲ್ಲಿ ಎಲ್ಲೆಡೆ ಲಭ್ಯವಾಗಿಸಬಾರದು? ದೆಹಲಿಯ ಸಫಲ್ ಸಂಸ್ಥೆ ಈಗಾಗಲೇ ಫ್ರೋಜನ್ ಗುಜ್ಜೆಯನ್ನು ದೇಶದ ಹಲವು ನಗರಗಳಲ್ಲಿ ಮಾರುಕಟ್ಟೆಗೇರಿಸಿದೆ. ಅದು ಬೆಂಗಳೂರಿಗೂ ತಲಪಿದೆ. ಕೇರಳ, ಮಹಾರಾಷ್ಟ್ರಗಳ ಕೆಲವು ಉದ್ಯಮಿಗಳೂ ಈಗ ಫ್ರೋಝನ್ ಹಲಸು ಹೊರತರುವ ಬಗ್ಗೆ ಪರಿಶೀಲಿಸುತ್ತಿದ್ದಾರೆ.

ಕರ್ನಾಟಕದಲ್ಲಿ ಕನಿಷ್ಠ ಒಂದುಸಾವಿರ ಹೆಕ್ಟಾರಿನಲ್ಲಿ ಹಲಸಿನ ಏಕಬೆಳೆ ಆರಂಭವಾಗಿದೆ. ಇವೆಲ್ಲವೂ ಆಯ್ದ ಉತ್ಕೃಷ್ಟ ತಳಿಯ ತೋಪುಗಳು. ಸಂಸ್ಕರಣೆಗೆ ಒಂದೇ ಜಾತಿಯ ಹಲಸು ಬೇಕೆನ್ನುವವರಿಗೆ ಇದನ್ನು ಒದಗಿಸುವ ಹಂತಕ್ಕೆ ನಾವು ಬರುತ್ತಲಿದ್ದೇವೆ. ಆದರೆ ಸದ್ಯ ಇರುವ ಕೊರತೆ ಏನು ಗೊತ್ತೇ? ಉದ್ಯಮಿಗಳಿಗೆ ಹಲಸು ಕೃಷಿಕರು ಎಲ್ಲಿದ್ದಾರೆ, ಎಷ್ಟು ಹಲಸು ಯಾವಾಗ ಸಿಗಬಹುದು ಎಂಬ ಚಿತ್ರವೇ ಗೊತ್ತಿಲ್ಲ. ಬೆಳೆದವರಿಗೆ ಒಳ್ಳೆ ಬೆಲೆಗೆ ಕೊಳ್ಳುವವರ ಪರಿಚಯವೇ ಇಲ್ಲ. ಕಮರ್ಶಿಯಲ್ ಹಲಸು ಕೃಷಿಕರ ಒಂದು ಡಾಟಾಬೇಸ್ ತಯಾರಿಸುವುದು ಈಗ ಇಕ್ಕೆಡೆಗಳ ಅಗತ್ಯವಾಗಿದೆ. ಈ ಬಗ್ಗೆ, ಈ ತೋಪುಗಳ ಹಲಸಿನ ಗೆಲ್ಲು ಸವರುವ (ಪ್ರೂನಿಂಗ್) ಬಗ್ಗೆ, ಒಳ್ಳೆ ವಾತಾವರಣದಲ್ಲಿ ನ್ಯಾಯ ಬೆಲೆ ಸಿಗುವಂತೆ ಮಾರುಕಟ್ಟೆ ಮಾಡುವ, ಬೆಳೆಯನ್ನು ಒಟ್ಟುಗೂಡಿಸುವ (ಪೂಲಿಂಗ್), ಸರಬರಾಜು ಸರಣಿ ರೂಪಿಸುವ ಬಗ್ಗೆ ಇಷ್ಟರಲ್ಲೇ ಮಾಸ್ಟರ್ ಪ್ಲಾನ್ ಆಗಬೇಕಿತ್ತು.  ಸಂಪಾದಕೀಯ

ದೇಶಮಟ್ಟದಲ್ಲಿ ಒಂದು ಜ್ಯಾಕ್ ಫ್ರುಟ್ ಮಿಶನ್ ರೂಪ ಪಡೆಯಲಿ. ಅದೂ ಈ ಮೇಲಿನ ಭದ್ರ ಅಡಿಪಾಯ ಹಾಕುವ, ಅಂದರೆ ಡಾಟಾ ಬೇಸ್ ತಯಾರಿ, ಬೆಳೆಕೇಂದ್ರಗಳಲ್ಲಿ ಕೋಲ್ಡ್ ರೂಮ್, ರೀಫರ್ ಟ್ರಕ್ ವ್ಯವಸ್ಥೆ ಇತ್ಯಾದಿಗಳನ್ನು ಒದಗಿಸುವ ಕೆಲಸ ಮಾಡಬೇಕಿದೆ. ಸರಕಾರದ ಸಹಾಯ ಇಲ್ಲದೆ ಇಷ್ಟು ಅಗಾಧ ಪ್ರಮಾಣದಲ್ಲಿ ಬೆಳೆಯುವ ಬೆಳೆ ನ್ಯಾಯಬೆಲೆ ತರುವಂತೆ ಮಾಡುವುದು ಅಸಾಧ್ಯ. ಆದರೆ ಸರಕಾರ, ಇಲಾಖೆಗಳು ಒತ್ತಡಕ್ಕಷ್ಟೇ ಸ್ಪಂದಿಸುತ್ತವೆ. ಒತ್ತಡ ಹಾಕುವ ಕೆಲಸ ಕೃಷಿಕಕೂಟಗಳು, ಜನಪ್ರತಿನಿಧಿಗಳಿಂದ ಆಗಬೇಕಿದೆ.

- ಶ್ರೀ ಪಡ್ರೆ

shreepadre@gmail.com