ADD

Back To Free Articles

September-2018

ದೊಡ್ಮನೆಯ ಕೃಷಿ ಸುಗಂಧದ ರಂಗೋಲಿ

ಬಾಳೆ ಹೂ ಮತ್ತದರ ಭಾಗಗಳನ್ನು ಸೇರಿಸಿ ರಚಿಸುವ ರಂಗೋಲಿ ಇವರ ಮಾಸ್ಟರ್ ಪೀಸ್ಇದುವೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದದ್ದು.

 
no image
 

ತಿಂಗಳುಗಳ ಹಿಂದೆ ವಾಟ್ಸಪ್, ಫೇಸ್ ಬುಕ್ಕುಗಳಲ್ಲಿ ಒಂದು ಅನನ್ಯ ರಂಗೋಲಿಯ ಫೋಟೊ ವೈರಲ್ ಆಯಿತು. ಆದರೆ ಅದರ ಕಲಾವಿದೆ ಯಾರು ಎನ್ನುವ ಮಾಹಿತಿಯೇ ಇರಲಿಲ್ಲ. ಈಗ ಈ ಕಲಾವಿದೆಯ ವಿವರ ಸಿಕ್ಕಿದೆ.

ಉತ್ತರ ಕನ್ನಡದ ಕೃಷಿಕುಟುಂಬಗಳಲ್ಲಿ ಮನೆ ಎದುರು ರಂಗೋಲಿ ಹಾಕುವ ಅಭ್ಯಾಸ ಹೊಸತೇನಲ್ಲ. ದಿನಕ್ಕೊಂದು ರಂಗೋಲಿ ಹಾಕಿಯೇ ಹಾಕುತ್ತಾರೆ. ಆದರೆ ದೊಡ್ಮನೆಯ ವಿದ್ಯಾ ಅವರ ಮನೆಯೆದುರು ಒಂದು ವಿಶೇಷ ಇರುತ್ತದೆ. ಅವರು ತಿಂಗಳಿಗೆರಡಾದರೂ ವಿಶೇಷ ರಂಗೋಲಿ ರಚಿಸಿಯೇ ರಚಿಸುತ್ತಾರೆ.

ಈ ವಿಶೇಷ ರಂಗೋಲಿಗೆ ವಿದ್ಯಾ ರಾಮನಾಥ ಹೆಗಡೆ ರಂಗೋಲಿ ಪುಡಿ ಬಳಸುವುದುಂಟು. ಬಣ್ಣಬಣ್ಣದ ರಂಗೋಲಿ ಹುಡಿ ಪೇಟೆಯಲ್ಲಿ ಸಿಗುತ್ತದೆ. ಇವುಗಳನ್ನು ಬಳಸಿ ಅವರು ಇನ್ನಷ್ಟು ವಿಭಿನ್ನ ಬಣ್ಣಗಳನ್ನು ಮಾಡಿಕೊಳ್ಳುತ್ತಾರೆ. ನಾಯಿ, ಮಾನವನ ಕಣ್ಣು, ಸರೋವರ, ಜಲಪಾತ, ಮಗು - ಹೀಗೆ ವಿದ್ಯಾ ಅವರ ರಂಗೋಲಿಯ ಥೀಮುಗಳೂ ವಿಭಿನ್ನ.

ಆದರೆ ಇನ್ನಷ್ಟು ಮನಮೋಹಕವಾಗುವುದು ಅವರ ಕೃಷ್ಯುತ್ಪನ್ನ ಬಳಸಿ ಮಾಡುವ ರಂಗೋಲಿ. ಬಾಳೆ ಹೂ ಮತ್ತದರ ಭಾಗಗಳನ್ನು ಸೇರಿಸಿ ರಚಿಸುವ ರಂಗೋಲಿ ಇವರ ಮಾಸ್ಟರ್ ಪೀಸ್.  ಇದುವೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದದ್ದು.

ಎರಡು ವರ್ಷ ಹಿಂದೆ ಹೀಗೊಂದು ಹವ್ಯಾಸಕ್ಕೆ ವಿದ್ಯಾ ಕೈ ಹಾಕಿದ್ದು ಮನಸ್ಸಂತೋಷಕ್ಕಾಗಿ. ಮನೆ ಬಾಗಿಲೆನೆದುರು ರಂಗೋಲಿ ಚಿತ್ರಿಸುವುದು ಮುಂಜಾನೆ ತಾನೇ. ಆದರೆ ವಿಶೇಷ ರಂಗೋಲಿಗೆ ಹೆಚ್ಚು ಸಮಯ ಏನಿಲ್ಲವೆಂದರೂ ಒಂದು ತಾಸು ಬೇಕು. ಹಾಗಾಗಿ ಬಿಡುವಿನ ಸಂಜೆ ಸಮಯವೇ ಸೈ. ``ಮಾಡಿಟ್ಟ ವಿಶೇಷ ರಂಗೋಲಿ ಮರುದಿನ ಅಳಿಸುವುದಿಲ್ಲ. ಏನಿಲ್ಲವೆಂದರೂ ಒಂದು ವಾರ ಉಳಿಸಿಕೊಳ್ಳುತ್ತೇವೆ'' ಎನ್ನುತ್ತಾರೆ ವಿದ್ಯಾ.

ಬಾಳೆ ಮೂತಿ ಅಲ್ಲದೆ ಅಡಿಕೆ, ಅಡಿಕೆ ಹಿಂಗಾರ, ಬಾಳೆಕಾಯಿ, ಬಾಳೆ ಎಲೆ, ಜಂಬೆ ಹೂವು ಯಾವ ಚಂದದ ವಸ್ತುವೂ ಆಗಬಹುದು. ಮೂಡ್ ಬಂದಾಗ ಮನೆಯ ಸುತ್ತಮುತ್ತ ಸುಲಭದಲ್ಲಿ ಕೈಹಾಕಿ ರೂಢಿಸಿಕೊಳ್ಳಬಲ್ಲ ಕಚ್ಚಾವಸ್ತುಗಳೆಲ್ಲಾ ವಿದ್ಯಾ ಅವರ ರಂಗೋಲಿಯ ಭಾಗವಾಗುವುದಿದೆ.

``ನಾವು ಇಬ್ಬರೇ ಇರೋದು ಮನೆಯಲ್ಲಿ. ಈ ಥರದ ಚಟುವಟಿಕೆ ಖುಷಿ ಕೊಡುತ್ತದೆ'' ಎನ್ನುತ್ತಾರೆ ಪತಿ ರಾಮನಾಥ ಹೆಗಡೆ. ಅವರದು ಪತ್ನಿಯ ಹವ್ಯಾಸಕ್ಕೆ ತುಂಬು ಪ್ರೋತ್ಸಾಹ. ಈಚೆಗಿನ ವರೆಗೂ ಹೊರಗಿನವರಿಗೆ ಈ ಬಗ್ಗೆ ಗೊತ್ತೇ ಇರಲಿಲ್ಲ. ವರ್ಷದ ಹಿಂದೆ ಸ್ಮಾರ್ಟ್‍ಫೋನ್ ಕೊಂಡ ನಂತರ ವಿದ್ಯಾ ತನ್ನ ಕೃತಿಗಳ ಫೋಟೋ ಹಿಡಿದಿಡುತ್ತಾರೆ.

``ದೂರದಿಂದ ಬಂದ ಅತಿಥಿ ಒಬ್ಬರು ನನ್ನ ರಂಗೋಲಿಯ ಫೋಟೋ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ ನಂತರವಷ್ಟೇ ಹೊರಗಿನವರಿಗೆ ಗೊತ್ತಾಯಿತು'' ಎನ್ನುತ್ತಾರೆ.

ಆದರೆ ವಿದ್ಯಾ ಅವರ ನಿಕಟವರ್ತಿಗಳಿಗೆ ಅವರ ಈ ಪ್ರತಿಭೆ ಗೊತ್ತು. ಮದುವೆ, ಶುಭ ಕಾರ್ಯಗಳಿಗೆ ಹೋದಲ್ಲಿ ಹಿಂದಿನ ದಿನವೇ ಅಂದಚಂದದ ರಂಗೋಲಿ ರಚಿಸಲು ಕೇಳಿಕೊಳ್ಳುತ್ತಾರೆ. ಜತೆಗಾರ್ತಿ ಒಬ್ಬರನ್ನು ಕೂಡಿಸಿಕೊಂಡು ವಿದ್ಯಾ ಈ ಕೆಲಸ ಅಚ್ಚುಕಟ್ಟಾಗಿ ಮಾಡುತ್ತಾರೆ.

ಇದು ಬಿಟ್ಟರೆ ಇವರು ಈ ವರೆಗೆ ಹೊರಗೆಲ್ಲೂ ಸಭೆ ಸಮಾರಂಭಗಳಲ್ಲಿ ತನ್ನ ಕಲಾಕೃತಿ ರಚಿಸಿದ್ದಿಲ್ಲ. ನೋಡಿ ಖುಷಿಪಟ್ಟು `ನನಗೂ ಕಲಿಸಿಕೊಡಿ' ಎಂದು ಸುತ್ತಲಿನ ಹೆಣ್ಮಕ್ಕಳು ಕೇಳಿ ಬರುವಂತಹ ಸ್ಥಿತಿಯೂ ಸೃಷ್ಟಿಯಾಗಿಲ್ಲ. ವಿದ್ಯಾ ಅವರ ಮೆಚ್ಚಬೇಕಾದ ವಿದ್ಯೆ ಬೆಳಕಿದ್ದೂ, ಕೈಯಲ್ಲಿ ಸಂವಹನದ ಮಾಧ್ಯಮಗಳಿದ್ದೂ ಕತ್ತಲಲ್ಲೇ ಉಳಿದಿದೆ.              

ಅಡಿಕೆ ಪತ್ರಿಕೆ ಓದುಗ ಕುಟುಂಬ ಇವರದು. ಹಲಸಿನ ಆಸಕ್ತಿ ಮೈಗೂಡಿದೆ. ``ಮುಂದೆ ಹಲಸಿನ ಭಾಗಗಳಿಂದ ರಂಗೋಲಿ ರಚಿಸಬೇಕು ಎಂದಿದ್ದೇನೆ'' ಎನ್ನುತ್ತಾರೆ ಈ ಉತ್ಸಾಹಿ ಗೃಹಿಣಿ.

ಸಂಪರ್ಕಕ್ಕೆ ರಾಮನಾಥ ಹೆಗಡೆಯವರ ನಂಬರು

87628 47345 (ಸಂಜೆ 6 -7)